NWKRTC: ಚಲಿಸುತ್ತಿದ್ದಾಗಲೇ ಸುಟ್ಟು ಭಸ್ಮವಾದ ಬಸ್ – ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಬೆಳಗಾವಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚರಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಹತ್ತರಗಿ ಟೋಲ್ ನಾಕಾ ಸಯೀದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ಮಾರಿಯಲ್ಲಿ ಗುರುವಾರ ಸಂಜೆ ಜರುಗಿದೆ.
ಕೂಲಾಪೂರದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಚಿಕ್ಕೋಡಿ ವಿಭಾಗದ ಸಂಕೇಶ್ವರ ಘಟಕದ ಬಸ್ ಹುಕ್ಕೇರಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿಯ ಗುಲಾಬಶಾವಲಿ ದರ್ಗಾ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ 4ರಲ್ಲಿ ಸಂಚರಿಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು ಭಸ್ಮವಾಗಿದೆ.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚಾಲಕ ಬಸ್‌ಅನ್ನು ಕೂಡಲೆ ನಿಲ್ಲಿಸಿದ್ದಾರೆ. ಈ ವೇಳೆ ಪ್ರಯಾಣಿಕರಿಗೆ ಕೂಡಲೇ ಇಳಿಯುವಂತೆ ಹೆಳಿದ್ದಾರೆ. ಗಾಬರಿಗೊಂಡ ಪ್ರಯಾಣಿಕರು ಕೆಳಗೆ ಇಳಿದು ಓಡಿ ಹೋಗಿದ್ದಾರೆ. ಹೀಗಾಗಿ ಚಾಲಕ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ವಿಷಯ ತಿಳಿದ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಸ್‌ನ ಬೆಂಕಿ ನಂದಿಸುವಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಯಮಕನಮರಡಿ ಸಿಪಿಐ ರಮೇಶ್ ಛಾಯಾಗೋಳ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.