ಪಿರಿಯಾಪಟ್ಟಣ : ಅಸಮಾನತೆಯಲ್ಲಿ ಬಳಲುತ್ತಿದ್ದ ಹೆಣ್ಣು ಮಕ್ಕಳಿಗೆ ಹಾಲು ಶೋಷಿತ ಸಮುದಾಯಕ್ಕೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಎಂದು ತಾಲೂಕು ಸಾವಿತ್ರಿ ಬಾಯಿ ಫುಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಗಾಯತ್ರಿ ತಿಳಿಸಿದರು.
ತಾಲೂಕಿನ ಜವರಿಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಲೇಖನಿ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಮಾತೆ ಸಾವಿತ್ರಿ ಬಾಯಿ ಫುಲೆಯವರು ಮಹಾರಾಷ್ಟ್ರದ ಸತಾರ ಜಿಲ್ಲೆಯ ನಯಂಗಾವ್ ಗ್ರಾಮದಲ್ಲಿ 1831ರ ಜನವರಿ 3 ರಲ್ಲಿ ನವಾಶೆ ಪಾಟೀಲ್ ಹಾಗೂ ಲಕ್ಷ್ಮೀಬಾಯಿಯವರ ಹಿರಿಯ ಮಗಳಾಗಿ ಜನಿಸಿದರು, ಈಕೆ ಬಾಲ್ಯದಲ್ಲಿಯೇ ದೀರ ದಿಟ್ಟ ಹುಡುಗಿಯಾಗಿದ್ದು, ತನ್ನ 9 ನೇ ವಯಸ್ಸಿಗೆ ತನಗಿಂತ 3 ವರ್ಷ ಹಿರಿಯರಾದ ಜ್ಯೋತಿಬಾಪುಲೆ ಯವರೊಂದಿಗೆ ವಿವಾಹವಾಯಿತು. ಅಕ್ಷರ ಕಲಿಯದ ಸಾವಿತ್ರಿ ಬಾಯಿ ಪುಲೆಯವರಿಗೆ ತನ್ನ ಪತಿಯಿಂದಲೆ ಅಕ್ಷರಭ್ಯಾಸ ಪ್ರಾರಂಭವಾಯಿತು.
ಆಗಿನ ಕಾಲದ ಸಾಮಾಜಿಕ ಶೋಷಣೆಗಳಾದ ವಿಧವಾ ವಿವಾಹ, ಸತಿಪದ್ದತಿ, ಬಾಲ್ಯವಿವಾಹ, ದೇವದಾಸಿ ಪದ್ದತಿ ಇವುಗಳ ವಿರುದ್ದ ಹೋರಾಡಬೇಕಾದರೆ ಮೊದಲಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣವಾಗಬೇಕೆಂದು ಅರಿತಿದ್ದರು. ಅದರಲ್ಲೂ ಅಸ್ಪೃಶ್ಯರ ಶೂದ್ರಾತಿ ಶೂದರರ ಹೆಣ್ಣು ಮಕ್ಮಳಿಗೆ ಶಿಕ್ಷಣ ನೀಡಿ ಈ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಬೇಕೆಂದು ಜ್ಯೋತಿ ಬಾಪುಲೆಯವರು 1846ರಲ್ಲಿ ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭಿಸಿದರು.
ಬಾಲ್ಯವಿವಾಹವಾಗಿದ್ದರೂ, ಪತಿ ಜ್ಯೋತಿಬಾ ಅವರಿಂದ ಪ್ರೇರಣೆ ಪಡೆದು ಅಕ್ಷರ ಕಲಿತು ಶಿಕ್ಷಕ ತರಬೇತಿ ಮುಗಿಸಿ, ದಲಿತ ಮತ್ತು ಶೋಷಿತ ಸಮುದಾಯದ ಬಾಲಕಿಯರಿಗೆ ಶಾಲೆ ಪ್ರಾರಂಭಿಸಿ, ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಜೀವನ ರೋಚಕವಾದುದು. ಸಮಾಜದ ಬಹಿಷ್ಕಾರ ಹಾಗೂ ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರೂ, ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿಯನ್ನು ಭಾರತೀಯ ಸಮಾಜ ಎಂದೂ ಮರೆಯಬಾರದು.
1848ರಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೊರ ಹೊಮ್ಮಿದ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ ಆಚರಣೆಗೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಸ್ಮರಣೀಯ, ಸಾವಿತ್ರಿ ಬಾಯಿ ಫುಲೆ ಹಿಂದುಳಿದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುತ್ತಾರೆಂದು ಅವರ ಮೇಲೆ ಸಗಣಿ ಎರಚಲಾಯಿತು. ಕಲ್ಲುತೂರಲಾಯಿತು. ಇಂಥ ಅವಮಾನ ಸಹಿಸಿದ ಸಾವಿತ್ರಿ ಫುಲೆ ಅವರ ಗಟ್ಟಿತನ ದೊಡ್ಡದು. ಅವರು ಚೀಲದಲ್ಲಿ ಮತ್ತೊಂದು ಸೀರೆಯನ್ನು ಸದಾ ಇಟ್ಟುಕೊಳ್ಳುತ್ತಿದ್ದರು. ಶಾಲೆಯನ್ನು ಮೊದಲೇ ತಲುಪಿ ಸಗಣಿ ಎರಚಿದ ಸೀರೆ ಬಿಟ್ಟು, ಮತ್ತೊಂದು ಸೀರೆಯುಟ್ಟು ಪಾಠಕ್ಕೆ ಅಣಿಯಾಗುತ್ತಿದ್ದರು. ಸಾವಿತ್ರಿಬಾಯಿ ಛಲ ನಿಮ್ಮಲ್ಲಿ ಬರಲಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಸಾವಿತ್ರಿಬಾಯಿ ಪುಲೆ ಆದಿಯಾಗಿ ನಮ್ಮ ದೇಶವನ್ನು ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ, ಪ್ರಧಾನಿ ಇಂದಿರಾ ಗಾಂಧಿ, ಗಗನಯಾತ್ರಿ ಕಲ್ಪನಾ ಚಾವ್ಲಾ, ದ್ರೌಪದಿ ಮುರ್ಮು ನೆನಪಿಡುವಂತಹ ಮಹಿಳೆಯರು ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಪೂಜಾ, ಸದಸ್ಯರಾದ ಚಿತ್ರಾ, ಶಿಕ್ಷಕರಾದ ಹೇಮಂತ್ ಕುಮಾರ್, ರುಕ್ಷೇನಾ, ರುಕ್ಮಿಣಿ, ಮೇರಿವಿಲ್ ಪ್ರೈಡ್, ವಸಂತ್, ನಾಗರತ್ನ, ಸಾವಿತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.