ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಹವಾಲುಗಳ ಸ್ವೀಕಾರ ಹಾಗೂ ಗ್ರಾಮ ವಾಸ್ತವ್ಯ ಹೂಡುತ್ತಿರುವ ಕಂದಾಯ ಸಚಿವ ಆರ್.ಅಶೋಕ, ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ, ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರೇವಣಪ್ಪ ಸೇರಿದಂತರ ಚುನಾಯಿತ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಸಂಭ್ರಮದಿಂದ ಗ್ರಾಮಸ್ಥರು ಸ್ವಾಗತಿಸಿದರು.
![](https://vijayapatha.in/wp-content/uploads/2023/01/21-Jan-Ashok-R-1-300x173.jpg)
ಗ್ರಾಮದ ಶ್ರೀ ಅಭಯ ಆಂಜನೇಯಸ್ವಾಮಿ ಹಾಗೂ ಐತಿಹಾಸಿಕ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಸಚಿವರು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಗ್ರಾ.ಪಂ. ಅಧ್ಯಕ್ಷೆ ಪಲ್ಲವಿ ಅರುಣಕುಮಾರ್, ಉಪಾಧ್ಯಕ್ಷ ರವಿಕುಮಾರ್ ಮತ್ತಿತರರು ಇದ್ದರು.
ಚಿತ್ತಾಕರ್ಷಿಸಿದ ಕಲಾತಂಡಗಳ ಮೆರವಣಿಗೆ: ಚಂಡೆ ಮದ್ದಳೆ,ತಮಟೆ,ಡೊಳ್ಳು,ಕೀಲುಕುದುರೆ,ಮರಗಾಲು,ಬೊಂಬೆ ಕುಣಿತ,ಮಹಿಳೆಯರ ವೀರಗಾಸೆ,ಪಟ ಕುಣಿತ,ಪೂಜಾ ಕುಣಿತ ಮೊದಲಾದ ಜನಪದ ಕಲಾತಂಡಗಳ ಮೆರವಣಿಗೆಯು ನೆರೆದ ಜಸಮೂಹದ ಚಿತ್ತಾಕರ್ಷಿಸಿತು.
ಹಸು ವಿತರಣೆ: ಹೈನುಗಾರಿಕೆ ಉತ್ತೇಜಿಸಲು ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಅಮೃತ ಸಿರಿ ಯೋಜನೆಯಡಿ ನೀಡಿದ ಏಳು ಮಿಶ್ರತಳಿ ಜರ್ಸಿ ಕರುಗಳನ್ನು ಸಚಿವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಇದೇ ಸಂದರ್ಭದಲ್ಲಿ ಪಶು ಆರೋಗ್ಯ ಶಿಬಿರವನ್ನೂ ಆಯೋಜಿಸಲಾಗಿತ್ತು.
![](https://vijayapatha.in/wp-content/uploads/2024/02/QR-Code-VP-1-1-300x62.png)