ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಇಂದು ಬೆಳಗ್ಗೆ ರಾಜರಾಜೇಶ್ವರಿ ನಗರದ ಬಿಎಂಟಿಸಿ (ಚಂನ್ನಸಂದ್ರ) ಘಟಕ -21 ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಚನ್ನಸಂದ್ರ ಘಟಕ -21ರ ನಿರ್ವಾಹಕ ಜೆ.ರಂಗನಾಥ್ ಎಂಬುವರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಅವರನ್ನು ಆರ್.ಆರ್.ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಡ್ಯೂಟಿಗೆ ಬಂದ ರಂಗನಾಥ್ ಅವರು ಡ್ಯೂಟಿ ಸಿಗದಿದ್ದಕ್ಕೆ ಮನನೊಂದು ಘಟಕದಲ್ಲೇ ಡೆತ್ ನೋಟ್ ಬರೆದು ವಿಷ ಸೇವಿಸಿ ಅಸ್ವಸ್ಥರಾಗಿದ್ದಾರೆ, ಅದನ್ನು ಗಮನಿಸಿದ ಸಿಬ್ಬಂದಿಗಳು ನಿರ್ವಾಹಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದಿದ್ದಾರೆ. ಅಧಿಕಾರಿಗಳ ಕಿರುಕುಳದಿಂದ ಮನನೊಂದು ಈ ರೀತಿ ಮಾಡಿಕೂಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆಯೂ ಕೂಡ ಅಧಿಕಾರಿಗಳ ಕಿರುಕುಳದಿಂದ ಇದೇ ಘಟಕದ ಚಾಲಕರೊಬ್ಬರು ಘಟಕದ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವೇಳೆ ಸುಮಾರು ಎರಡು ದಿನಗಳ ಕಾಲ ಪ್ರತಿಭಟನೆ ಕೂಡ ನಡೆದಿತ್ತು. ಈಗಲೂ ಕೂಡ ಇದೇ ಘಟಕದಲ್ಲಿ ಈ ರೀತಿ ಅಧಿಕಾರಿ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದು ನೌಕರರಲ್ಲಿ ಆತಂಕ ಹೆಚ್ಚಾಗುತ್ತಿದೆ.
ವಿಷ ಸೇವಿಸುವ ಮುನ್ನ ಡೆತ್ ನೋಟ್ ಬರೆದಿರುವ ರಂಗನಾಥ್: ನಾನು ಜೆ.ರಂಗನಾಥ್ ಬಿಲ್ಲೆ ಸಂ.9477 ನಿರ್ವಾಹಕ. 22 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಸ್ವಾಮಿ. ಕಳೆದ ಒಂದು ವರ್ಷದಿಂದ ಶೋಭಾ ಟಿಐ ಘಟಕ 21, ಅವರು ನನ್ನನ್ನು ಅವರ ಗುಲಾಮನ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ನಾನು ಪ್ರತಿದಿನ ಡ್ಯೂಟಿಗೆ ಬಂದರು ನಮ್ಮನ್ನು ಕಡೆಗಣಿಸಿ ನನಗೆ ಕರ್ತವ್ಯ ನಿರ್ವಹಿಸಲು ಜಿಗುಪ್ಸೆಯಾಗುವಂತೆ ಮಾಡಿ ಡ್ಯೂಟಿ ಕೊಡದೆ ವಾಪಸ್ ಕಳುಹಿಸುತ್ತಾರೆ. ಈ ರೀತಿಯಲ್ಲಿ ನನ್ನನ್ನು ನಡೆದುಕೊಳ್ಳುತ್ತಾರೆ.
ಆ ಬ್ರಿಟಿಷರ ಕಾಲದಲ್ಲಿ ನಮ್ಮ ಭಾರತೀಯರನ್ನು ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಈಗ ನಮ್ಮ ಭಾರತಕ್ಕೆ ಸ್ವಾತಂತ್ರ ಬಂದ 75 ವರ್ಷದ ನಂತರವೂ ಈ ಅಧಿಕಾರಿಗಳ ಮುಂದೆ ನಾವು ನೌಕರರು ಗುಲಾಮರಾಗಿ ಬಾಳುತ್ತಿದ್ದೇವೆ ಸ್ವಾಮಿ. ಕಳೆದ ಒಂದು ವರ್ಷದಿಂದ ನಾನು ಪಡುತ್ತಿರುವ ನೋವು ಸಂಕಟ, ಶೋಭಾ ಅವರು ತೋರುತ್ತಿರುವ ತನ್ನ ಅಧಿಕಾರದ ದರ್ಪ, ನನ್ನನ್ನು ಜೀವನದಲ್ಲಿ ಕುಗ್ಗುವಂತೆ ಮಾಡಿದೆ.
ನನಗೆ ಕಿರುಕು ನೀಡಬೇಡಿ ಎಂದು ಪರಿಪರಿಯಾಗಿ ಕೈ ಮುಗಿದು ಬೇಡಿಕೊಂಡರು ಮಾನವೀಯತೆ ಇಲ್ಲದ ಆ ಅಧಿಕಾರಿ ನನಗೆ ಕಿರುಕುಳ ಕೊಡುತ್ತಲೇ ಬಂದಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲೇಬೇಕು ಸ್ವಾಮಿ. ನನ್ನ ಆತ್ಮಹತ್ಯೆಗೆ ನೇರ ಹೊಣೆ ಶೋಭಾ ಅವರೇ ಆಗಿದ್ದಾರೆ ಸ್ವಾಮಿ.
ನಮಗೆ ಸ್ವಾತಂತ್ರ ಸಿಕ್ಕಿ 75 ವರ್ಷ ಕಳೆದರೂ ಇನ್ನೂ ಈ ಅಧಿಕಾರಿಗಳ ದರ್ಪದಿಂದ ನಾವು ಗುಲಾಮರಾಗಿ ಬಾಳುತ್ತಿರುವುದು ಖಂಡನೀಯ. ನಾನು ಈ ಅಧಿಕಾರಿಗಳ ಗುಲಾಮನಾಗಿರಲು ಇಚ್ಛಿಸುವುದಿಲ್ಲ. ಇದರ ಬದಲು ಸ್ವಾಭಿಮಾನದಿಂದ ನಾನು ಸಾಯುತ್ತೇನೆ ಹೊರತು ಈ ಅಧಿಕಾರಿಗಳ ಗುಲಾಮನಾಗಲು ಇಚ್ಛಿಸುವುದಿಲ್ಲ.
ಸರ್ಕಾರಕ್ಕೆ ನನ್ನದೊಂದು ಕೊನೆಯ ಕೊನೆಯ ಆಸೆ : ಸರ್ಕಾರಕ್ಕೆ ನನ್ನದೊಂದು ಕೊನೆಯ ಕೊನೆಯ ಆಸೆ (LAST WISH) ದಯಮಾಡಿ ನಿಮ್ಮ ಹಠಮಾರಿತನವನ್ನು ಬಿಟ್ಟು ನಮ್ಮ ನೌಕರರಿಗೆ ಅನ್ಯಾಯ ಮಾಡದೆ ಕಳೆದ ಆರು ವರ್ಷಗಳಿಂದ ಬರಬೇಕಾದ ಸವಲತ್ತುಗಳನ್ನು ನೀಡಿ ನನ್ನ ಆತ್ಮಕ್ಕೆ ಶಾಂತಿ ನೀಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತಿದ್ದೇನೆ.
ಲೋಬೋ ಭಾರತ್ ಮಾತಾಕಿ ಜೈ ಒಂದೇ ಮಾತರಂ ಒಂದೇ ಮಾತರಂ ಎಂದು ಡೆತ್ ನೋಟ್ ಬರೆದಿದ್ದಾರೆ.