ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ಕುಕ್ಕರ್, ಸೀರೆ, ಬಳೆ, ಬೆಳ್ಳಿಯ ಗಣೇಶ ವಿಗ್ರಹ ಮುಂತಾದ ಆಮಿಷಗಳನ್ನು ಒಡ್ಡುತ್ತಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಆಮಿಷ ಒಡ್ಡಿದ ವಸ್ತುಗಳ ಸಹಿತ ಆಮ್ ಆದ್ಮಿ ಪಾರ್ಟಿಯು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ, ಭ್ರಷ್ಟ ರಾಜಕಾರಣಿಗಳು ಕುಕ್ಕರ್, ಸೀರೆ ಮುಂತಾದವುಗಳನ್ನು ಮತದಾರರಿಗೆ ಹಂಚುತ್ತಿರುವದನ್ನು ಪತ್ತೆ ಹುಚ್ಚುವುದೇ ಕಷ್ಟ. ಆದರೂ ನಾವು ಪತ್ತೆ ಹಚ್ಚಿ, ಮತದಾರರ ಮನವೊಲಿಸಿ ಆ ವಸ್ತುಗಳನ್ನು ತೆಗೆದುಕೊಂಡು ಬಂದಿದ್ದೇವೆ.
ರಾಜಕಾರಣಿಗಳು ನೀಡಿದ್ದ ಬೆಳ್ಳಿ ಗಣೇಶ ವಿಗ್ರಹವನ್ನು ಮತದಾರರಿಂದ ತೆಗೆದುಕೊಂಡು ಬರುವುದಂತೂ ತುಂಬಾ ಕಷ್ಟವಾಯಿತು. ಈ ರೀತಿ ಅವ್ಯಾಹತವಾಗಿ ಆಮಿಷಗಳನ್ನು ಒಡ್ಡುತ್ತಿರುವಾಗ, ಚುನಾವಣೆಯು ನ್ಯಾಯಯುತವಾಗಿ ನಡೆಯುತ್ತಿದೆ ಎಂದು ಹೇಗೆ ಭಾವಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಚುನಾವಣಾ ಆಯೋಗವು ಇದನ್ನು ಅತ್ಯಂತ ಗಂಭಿರವಾಗಿ ಪರಿಗಣಿಸಿ, ಆಮಿಷ ಒಡ್ಡುವವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಮತದಾರರಿಗೆ ಉಡುಗೊರೆಗಳನ್ನು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯವನ್ನೇ ಬುಡಮೇಲು ಮಾಡುತ್ತಿವೆ. ರಾಜಕಾರಣಿಗಳ ಹಿನ್ನೆಲೆ, ಸಿದ್ಧಾಂತ, ಸಾಧನೆ ಹಾಗೂ ಆಶ್ವಾಸನೆಗಳನ್ನು ನೋಡಿ ಜನರು ಮತ ಚಲಾಯಿಸಬೇಕು.
ಆದರೆ, ಇವ್ಯಾವುದೂ ಸರಿಯಿಲ್ಲದ ಕಾರಣಕ್ಕೆ ಅನೇಕ ರಾಜಕಾರಣಿಗಳು ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಮತ ಕೇಳುತ್ತಿದ್ದಾರೆ. ಅಧಿಕಾರ ಸಿಕ್ಕಾಗಲೆಲ್ಲ ಲೂಟಿ ಮಾಡಿದ ಜನರ ತೆರಿಗೆ ಹಣವನ್ನು ಈಗ ಈ ರೀತಿ ಆಮಿಷವೊಡ್ಡಲು ಬಳಸಿಕೊಳ್ಳುತ್ತಿವೆ. ಜನರು ಇಂತಹವುಗಳಿಗೆ ಮರುಳಾಗದೇ ಪ್ರಾಮಾಣಿಕರಿಗೆ ಮತ ನೀಡಬೇಕು ಎಂದು ಮೋಹನ್ ದಾಸರಿ ಹೇಳಿದರು.
ನೀತಿ ಸಂಹಿತೆ ಜಾರಿಯಾದ ಬಳಿಕವಷ್ಟೇ ಚುನಾವಣಾ ಅಧಿಕಾರಿಗಳು ಆಮಿಷಗಳಿಗೆ ತಡೆಯೊಡ್ಡಲು ಮುಂದಾಗುತ್ತಾರೆ. ಇದರ ಲಾಭ ಪಡೆದ ರಾಜಕಾರಣಿಗಳು ನೀತಿ ಸಂಹಿತೆ ಜಾರಿಗೂ ಮುನ್ನವೇ ವಿವಿಧ ಆಮಿಷಗಳನ್ನು ಒಡ್ಡುತ್ತಿವೆ. ಆದ್ದರಿಂದ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುನ್ನ ಹಂಚುವ ಆಮಿಷಗಳಿಗೂ ಕಡಿವಾಣ ಹಾಕಬೇಕು. ಆಗ ಮಾತ್ರ ಚುನಾವಣೆಯು ನ್ಯಾಯಯುತವಾಗಿ ನಡೆಯುತ್ತದೆ. ಈ ರೀತಿ ದುಬಾರಿ ಆಮಿಷ ಒಡ್ಡಲು ರಾಜಕಾರಣಿಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದರ ತನಿಖೆಯಾಗಿ ಸತ್ಯ ಹೊರಬರಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಸುರೇಶ್ ರಾಥೋಡ್, ಜಗದೀಶ್ ವಿ ಸದಂ, ಉಷಾ ಮೋಹನ್, ಸುಮನ್ ಪ್ರಶಾಂತ್, ಶಾಶಾವಲ್ಲಿ, ಶ್ರೀನಿವಾಸ್ ರೆಡ್ಡಿ, ವಿಶ್ವನಾಥ್ ಮತ್ತಿತರ ನಾಯಕರು ಭಾಗವಹಿಸಿದ್ದರು.