ಹನೂರು: ತಾಲೂಕಿನ ಅರಣ್ಯ ಪ್ರದೇಶದ ಸಮೀಪದಲ್ಲಿರುವ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಳಿಸುವ ಘಟನೆ ಜರುಗಿದೆ.
ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆ ಮುಂಭಾಗದಲ್ಲಿ ಕುಳಿತಿದ್ದ ಆರೆಳು ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಬಾಲಕಿಯ ಕುತ್ತಿಗೆ ಕಚ್ಚಿದ್ದು ಆಕೆ ಗಂಭೀರವಾಗಿ ಗಾಯೊಂಡಿದ್ದಾಳೆ.
ಚಿರತೆ ಮಗಳ ಮೇಲೆ ದಾಳಿ ಮಾಡಿದ್ದನ್ನು ಸಮೀಪದಲ್ಲೇ ಇದ್ದ ಬಾಲಕಿಯ ತಂದೆ ನೋಡಿ ಕಿರುಚಾಡಿದ್ದಾರೆ. ಅವರ ಕಿರುಚಾಟಕ್ಕೆ ಭಯಗೊಂಡ ಚಿರತೆಯೂ ಅಲ್ಲಿಂದ ಬಾಲಕಿಯನ್ನು ಬಿಟ್ಟು ಓಡಿಹೋಗಿದೆ.
ನಂತರ ಚಿರತೆ ದಾಳಿಯಿಂದ ಗಾಯಗೊಂಡ ಬಾಲಕಿಯನ್ನು ಸಮೀಪದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಇತ್ತೀಚಿಗೆ ಕಾಡಂಚಿನ ಗ್ರಾಮಗಳಲ್ಲಿ ಮನುಷ್ಯರ ಮೇಲೆ ಚಿರತೆ ಮತ್ತು ಆನೆಗಳ ದಾಳಿಗಳು ಹೆಚ್ಚಾಗಿದೆ. ಅರಣ್ಯ ಸಮೀಪದ ಗ್ರಾಮಗಳಿಗೆ ಅರಣ್ಯ ಇಲಾಖೆ ಸೂಕ್ತ ರಕ್ಷಣೆ ಕ್ರಮ ಜರುಗಿಸುವ ಮೂಲಕ ಇಂತಹ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಮುಂದಾಗಬೇಕಿದೆ.