ಬಳ್ಳಾರಿ: ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದ ವಿಭಾಗಿಯ ಭದ್ರತಾ ಅಧಿಕಾರಿ ಹುಸೇನಪ್ಪ ಅವರನ್ನು ಅಮಾನುಷವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳು ಯಾರೇ ಆಗಿರಲಿ ಕೂಡಲೇ ಅವರನ್ನು ಬಂಧನಕ್ಕೋಳಪಡಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕಲ್ಬುರ್ಗಿ ವಲಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಆಗ್ರಹಿಸಿದೆ.
ಈ ಬಗ್ಗೆ ಮಾತನಾಡಿರುವ ಕೂಟದ ಪದಾಧಿಕಾರಿಗಳು ಈ ಹತ್ಯೆ ಆರೋಪಿಗಳನ್ನು ಸುಮ್ಮನೆ ಬಿಡಬಾರದು. ಅವರು ಯಾರೆ ಆಗಿರಲಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಅಧಿಕಾರಿ ಹುಸೇನಪ್ಪ ಅವರ ಹತ್ಯೆಯಿಂದ ಇಲ್ಲಿನ ಅಧಿಕಾರಿಗಳಿಗೆ ಭಯದ ವಾತಾವರಣ ಉಂಟಾಗುತ್ತಿದೆ. ಹೀಗಾಗಿ ಕೊಲೆಗಾರರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಏಳು ಜಿಲ್ಲೆಗಳ ಒಂಬತ್ತು ವಿಭಾಗಗಳಲ್ಲಿನ ಎಲ್ಲ ಘಟಕ ಮತ್ತು ಕಾರ್ಯಾಗಾರಗಳನ್ನು ಮುಚ್ಚಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಘಟನೆ ಏನು? : ಬಳ್ಳಾರಿ ವಿಭಾಗದ ವಿಭಾಗೀಯ ಭದ್ರತಾ ಇನ್‌ಸ್ಪೆಕ್ಟರ್ ಹುಸೇನಪ್ಪ ಅವರನ್ನು ಭಾನುವಾರ (ಆ.6) ರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಗರದ ಜೈಲಿನ ಬಳಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಬೀದರ್‌ನಲ್ಲಿ ನಡೆಯುತ್ತಿರುವ ಚಾಲಕರ ನೇಮಕಾತಿ ಪರೀಕ್ಷೆಗೆ ಅವರನ್ನು ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಅವರು ಡ್ಯೂಟಿಗೆ ರಾತ್ರಿ ಹೊರಡುತ್ತಿದ್ದರು. ಆದರೆ, ಮನೆಯಿಂದ ಕೂಗಳತೆ ದೂರದಲ್ಲಿ ಅವರ ಮೇಲೆ ದಾಳಿಮಾಡಿ ಹತ್ಯೆ ಮಾಡಿದ್ದಾರೆ.
ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದಂತೆ ಕಿರುಚಿಕೊಂಡು ತಪ್ಪಿಸಿಕೊಳ್ಳಲು ಮನೆಯೊಂದರ ಸಮೀಪಕ್ಕೆ ಅವರು ಓಡಿಹೋದರು. ಆದರೂ ಅವರನ್ನು ಬಿಡದೆ ಬೆನ್ನಟ್ಟಿದ ಪಾಪಿಗಳು ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ.