ಬೆಂಗಳೂರು: ಕರ್ನಾಟಕದ ಐದು ಗ್ಯಾರಂಟಿಗಳು, ಆಡಳಿತದ ನೀಲಿ ನಕ್ಷೆಯಾಗಿದೆ. ಬಡವರ ಪರವಾದ ಸರ್ಕಾರ ನಮ್ಮದು. ನಾವು ಯಾವುದೇ ಧರ್ಮ, ಜಾತಿ ಅಂತ ನೋಡಲ್ಲ. ಎಲ್ಲರಿಗೂ ತಲುಪುವ ಕಾರ್ಯಕ್ರಮ ಮಾಡುತ್ತೇವೆ. ದೇಶದಲ್ಲಿ ಕರ್ನಾಟಕ ಮಾದರಿ ಆಗಿದೆ. ದೇಶದ ಆಡಳಿತಕ್ಕೆ ಕರ್ನಾಟಕ ದಿಕ್ಸೂಚಿ ಆಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಡಿ ಹೊಗಳಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬೃಹತ್ ವೇದಿಕೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಮುಂಚೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯನ್ನು ನಾವಿಂದು ಈಡೇರಿಸಿದ್ದೇವೆ. ಕಾಂಗ್ರೆಸ್ ಏನು ಹೇಳುತ್ತದೆಯೋ ಅದನ್ನೇ ಮಾಡುತ್ತದೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದರು.
ಇಂದು ಡಿಬಿಟಿ ವರ್ಗಾವಣೆ ಬಟನ್ ಒತ್ತಿದೆ ಕೋಟ್ಯಂತರ ಮಹಿಳೆಯರಿಗೆ ಹಣ ವರ್ಗಾವಣೆ ಆಗಿದೆ. ಪ್ರತಿ ತಿಂಗಳು ಈ ಹಣ ವರ್ಗಾವಣೆ ಆಗುತ್ತದೆ. ಇದು ಕರ್ನಾಟಕ ಸರ್ಕಾರದ ಗ್ಯಾರಂಟಿ ಎಂದರು.
ಮಹಿಳೆಯರ ಪರ ಯೋಜನೆಗಳು: ಮಹಿಳೆಯರು ಉಚಿತ ಪ್ರಯಾಣ ಮಾಡಲಿ ಅಂತ ಶಕ್ತಿ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ. ಅನ್ನಭಾಗ್ಯ ಯೋಜನೆ ಮೂಲಕ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವಿದ್ಯುತ್ ಕೊಡುತ್ತಿದ್ದೇವೆ. ಈ ಎಲ್ಲ ಯೋಜನೆಗಳು ಮಹಿಳೆಯರ ಪರವಾದ ಯೋಜನೆಗಳಾಗಿವೆ. ಶೀಘ್ರದಲ್ಲೇ ಯುವ ನಿಧಿ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಯೋಜನೆಗಳ ಹಿಂದೆ ಆಳವಾದ ಯೋಚನೆ ಇದೆ. ಮರದ ಬೇರು ಸದೃಢ ಇಲ್ಲ ಅಂದ್ರೆ ಮರ ನಿಲ್ಲುವುದಿಲ್ಲ. ಮರದ ಬೇರು ಗಟ್ಟಿಯಾಗಿರಬೇಕು. ಅದರಂತೆ ನಾವು ಕಟ್ಟಡ ಕಟ್ಟಲು ಭದ್ರವಾದ ಅಡಿಪಾಯ ಹಾಕಬೇಕು. ಆಗ ಮಾತ್ರ ಭದ್ರವಾದ ಮನೆ ನಿರ್ಮಾಣ ಮಾಡಲು ಸಾಧ್ಯ ಎಂದರು.
ಇನ್ನು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಮಹಿಳೆಯರ ಜತೆ ನಾನು ಮಾತನಾಡಿದ್ದೇನೆ. ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಆಗಿತ್ತು. ಇದೆಲ್ಲವು ಪಾದಯಾತ್ರೆ ವೇಳೆ ನನಗೆ ಗೊತ್ತಾಯ್ತು. ಬೆಲೆ ಇಳಿಸಿ ಎಂದು ಸಾವಿರಾರು ಮಹಿಳೆಯರು ಕೇಳಿದರು ಆ ವೇಳೆ ನಾವು ಯೋಜನೆ ರೂಪಿಸಬೇಕು ಎಂದು ಯೋಚಿಸಿ ಈ ಯೋಜನೆಗಳ ಭರವಸೆ ನಿಡಿದ್ದೆವು ಅದರಂತೆ ಇಂದು ಜಾರಿಗೆ ತಂದಿದ್ದೇವೆ ಎಂದರು.
ಇನ್ನು ಮಹಿಳೆಯರು ಇಲ್ಲದೆ ರಾಜ್ಯ ಇರಲು ಸಾಧ್ಯವಿಲ್ಲ. ಮಹಿಳೆಯರು ರಾಜ್ಯದ ಶಕ್ತಿ. ರಾಜ್ಯಾದ್ಯಂತ ಇವತ್ತು ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರ ನೂರು ಪೂರೈಸಿದೆ. ಇದರಿಂದ ನನಗೆ ಸಂತೋಷ ಆಗಿದೆ. ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ. ವಿಶೇಷ ದಿನವಾದ ಇಂದು ಮಹಿಳೆಯರ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಯಾವುದೇ ಧರ್ಮ, ಜಾತಿ ನೋಡಲ್ಲ: ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ದೆಹಲಿ ಸರ್ಕಾರ ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತದೆ. ಅವರ ಎರಡ್ಮೂರು ಗೆಳೆಯರ ಪರವಾಗಿ ಮಾತ್ರ ಕೆಲಸ ಮಾಡುತ್ತದೆ ಎಂದರು.
ಮಹಿಳೆಯರೇ ಈ ರಾಜ್ಯದ ಅಭಿವೃದ್ಧಿಗೆ ಕಾರಣ: ಗೃಹಲಕ್ಷ್ಮೀ ಯೋಜನೆ ವಿಶ್ವದ ಅತಿ ದೊಡ್ಡ ಯೋಜನೆಯಾಗಿದೆ. ಭಾರತದ ಬೃಹತ್ ಹಣ ವರ್ಗಾವಣೆ ಯೋಜನೆ ಇದು. ಮಕ್ಕಳ ಭವಿಷ್ಯದ ಯೋಜನೆ ಇದು. ನಾವು ಮಾತು ಕೊಟ್ಟಂತೆ ನಾವು ನಡೆದಿದ್ದೇವೆ. ಮಹಿಳೆಯರೇ ಈ ರಾಜ್ಯದ ಅಭಿವೃದ್ಧಿಗೆ ಕಾರಣ.
ನಾವು ಯಾವತ್ತೂ ಸುಳ್ಳು ಭರವಸೆ ಕೊಡುವುದಿಲ್ಲ ಎನ್ನುವ ಮೂಲಕ ರಾಹುಲ್ ಗಾಂಧಿ ಮಹಿಳೆಯರ ಪರವಾಗಿ ಮಾತನಾಡಿ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಹಿಳೆಯರ ಪರವಾಗಿ ರಾಹುಲ್ ಬ್ಯಾಟ್ ಬೀಸಿದರು.