ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದರ ವಿರುದ್ಧ ಇಂದು ಮುಂಜಾನೆಯಿಂದಲೇ ಬೆಂಗಳೂರು ಬಂದ್ ನಡೆಯುತ್ತಿದೆ. ಬಂದ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಂದ್‌ಗೆ ಕರೆ ನೀಡಿರುವ ಜಲ ಸಂರಕ್ಷಣಾ ಸಮಿತಿಯ ಮುಖ್ಯಸ್ಥರಲ್ಲಿ ಒಬ್ಬರಾದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಂತಕುಮಾರ್ ‘ವಶಕ್ಕೆ ಪಡೆಯುವುದಕ್ಕೆ ನಾವೇನು ಭಯೋತ್ಪಾದಕ ಚಟುವಟಿಕೆ ಮಾಡ್ತಿಲ್ಲ. ಕುಡಿಯಲು ನೀರಿಲ್ಲ ಅಂದ್ರೆ ರಾಜಕಾರಣಿಗಳು ಮನೆಗೆ ಹೋದಾಗ ಏನು ಹೇಳ್ತೀರಾ? ಜಲ್ಲಿಕಟ್ಟು ಸಂಬಂಧ ಪ್ರತಿಭಟನೆ ಆದಾಗ ತಮಿಳುನಾಡು ಪೊಲೀಸರು ಸಹಕಾರ ನೀಡಿದ್ದರು. ನಮ್ಮ ಪೊಲೀಸರು ಕೂಡ ಅದೇ ರೀತಿ ಸಹಕಾರ ನೀಡಬೇಕಿತ್ತು ಎಂದರು.
ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಜಮಾವಣೆಗೊಂದು ಪ್ರತಿಭಟನೆ ನಡೆಸಿ ಅಲ್ಲಿಂದ ಟೌನ್ ಹಾಲ್ ಕಡೆಗೆ ಹೋಗುವ ಪ್ಲ್ಯಾನ್ ಹೊಂದಿದ್ದ ಕುರುಬೂರು ಶಾಂತ ಕುಮಾರ್ ಅವರನ್ನು ಸರ್ಕಲ್‌ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 144 ಅಡಿ ಜಾರಿ ಮಾಡಿರುವ ನಿಷೇಧಾಜ್ಞೆ ನಿಯಮದಡಿ ಅವರನ್ನು ಬಂಧಿಸಿದ್ದಾರೆ. ಆದರೆ, ಇದೊಂದು ಗೂಂಡಾಗಿರಿ ಎಂದು ಶಾಂತ ಕುಮಾರ್ ಮತ್ತು ಅವರ ಬೆಂಬಲಿಗರು ಆಕ್ಷೇಪಿಸಿದ್ದಾರೆ. ಶಾಂತಕುಮಾರ್ ಅವರ ಜತೆ ಇನ್ನೂ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಪ್ರತಿಭಟನಾಕಾರರಿಗೆ ತೊಂದರೆ ಕೊಡುತ್ತಿದ್ದಾರೆ. ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಹೇಳಿದ ಅವರು, ಕುಡಿಯುವ ನೀರಿಲ್ಲ ಅಂದ್ರೆ ಮನೆಗೆ ಹೋದಾಗ ಏನು ಹೇಳ್ತೀರಾ ಎಂದು ಪೊಲೀಸರನ್ನೇ ಪ್ರಶ್ನಿಸಿದರು. ʻʻಸದ್ಯದವರೆಗೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಬೆಂಬಲ ನೀಡಿದ್ದಾರೆ. ನಮ್ಮ ಹೋರಾಟ, ಚಳವಳಿ ಮುಂದುವರಿಯಲಿದೆʼʼ ಎಂದು ಕುರುಬೂರು ಇದೇ ಸಂದರ್ಭದಲ್ಲಿ ಹೇಳಿದರು.
ರಾಜ್ಯದ ರೈತರು ಗಮನಿಸುತ್ತಿದ್ದಾರೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಹೀಗಾಗಿ ಪೊಲೀಸರು ಎಚ್ಚರಿಕೆಯಿಂದ ಇರಬೇಕುʼʼ ಎಂದು ಕುರುಬೂರು ಎಚ್ಚರಿಸಿದರು.
ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ: ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಸೇರಿದ್ದ ರೈತರನ್ನೂ ಪೊಲೀಸರು ಚದುರಿಸಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಗೂಂಡಾಗಿರಿಗೆ ಧಿಕ್ಕಾರ ಎಂದು ಕೂಗಿದರು.
ಹೇಗಿದೆ ಬೆಂಗಳೂರು ಬಂದ್?: ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಬೆಂಗಳೂರಿನ ಪ್ರಮುಖ ಭಾಗಗಳಾದ ಮೆಜೆಸ್ಟಿಕ್‌ನಲ್ಲಿ ಜನ ಸಂಚಾರ ಕಡಿಮೆ ಇದೆ. ಬಿಎಂಟಿಸಿ ಬಸ್‌ಗಳು ಹೊರಟಿವೆಯಾದರೂ ಜನರಿಂದಲೆ ಖಾಲಿಖಾಲಿಯಾಗಿಯೇ ಸಂಚರಿಸುತ್ತಿವೆ. ಇನ್ನು ಮೆಟ್ರೋ ಸಂಚಾರ ಎಂದಿನಂತೆ ಇದ್ದು, ಜನರೂ ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಬಿಕೋ ಎನ್ನುತ್ತಿದೆ.