ಪಿರಿಯಾಪಟ್ಟಣ: ರಾಜ್ಯ ಸರ್ಕಾರ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಆದಿಚುಂಚನಗಿ ಸಮುದಾಯ ಭವನದಲ್ಲಿ ಭಾನುವಾರ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಸಣ್ಣಪುಟ್ಟ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರು ಕೆಲಸ ಮಾಡುತ್ತಿದ್ದಾರೆ ಇವರ ಅಧಿಕಾರದ ಅವಧಿಯಲ್ಲಿ ಆಯಾ ಸಮುದಾಯಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ಉದ್ದೇಶದಿಂದ ಮತ್ತು ಈ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನೇರ ಸಾಲ ಮತ್ತು ಇತರೆ ಸೌಕರ್ಯಗಳಿಗಾಗಿ ವಿಶ್ವಕರ್ಮ ಜಯಂತಿ ಹಾಗೂ ನಿಗಮಗಳನ್ನು ರಚಿಸಿ ಅನುದಾನ ಬಿಡುಗಡೆ ಮಾಡಿ ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಇನ್ನು ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು, ತಾಲೂಕಿನಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಮಹತ್ವ ಇದೆ. ಅದನ್ನು ಗೌರವಿಸಬೇಕು. ವಿಶ್ವಕರ್ಮ ಜನಾಂಗವಿಲ್ಲದೆ ಸಮಾಜ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ಅಭಿವೃದ್ಧಿಗೆ ಪೂರಕವಾದ ವಿಶ್ವಕರ್ಮ ಸಮಾಜದ ಕುಲ ಕಸುಬುಗಳಿವೆ. ಆದರೆ ಈ ಸಮುದಾಯ ತಮ್ಮ ವೃತ್ತಿಪರತೆಗೆ ನೀಡುವಷ್ಟೇ ಮಹತ್ವವನ್ನು ಶಿಕ್ಷಣಕ್ಕೆ ನೀಡಬೇಕು ತಾಲೂಕಿನಲ್ಲಿ ವಿಶ್ವಕರ್ಮ ಸಮಾಜದ ಭವನದ ಅಭಿವೃದ್ಧಿಗೆ ಸಂಸದ ನಿಧಿಯಿಂದಲೂ 25 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಅನಾದಿ ಕಾಲದಿಂದಲೂ ಕಲೆ, ನೈಪುಣ್ಯತೆ, ಕೌಶಲ್ಯತೆಗೆ ಹೆಸರಾದ ವಿಶ್ವಕರ್ಮ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು, ಶೋಷಿತ ವರ್ಗಗಳ ಅಭಿವೃದ್ಧಿ ಸಂವಿಧಾನದಿಂದ ಮಾತ್ರ ಸಾಧ್ಯ, ಆದ್ದರಿಂದ ಪೂಜ್ಯ ಸ್ವಾಮೀಜಿಯವರು ಹಿಂದುಳಿದ ವರ್ಗಗಳ ನೇತೃತ್ವ ವಹಿಸಿ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅರೆ ಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನದ ಶ್ರೀ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಸಿ.ಮಹೇಶ್, ಬೆಂಗಳೂರಿನ ವಾಸ್ತು ಮತ್ತು ಶಿಲ್ಪಿತಜ್ಞ ಕೆ.ಪಿ.ದಕ್ಷಿಣಾಮೂರ್ತಿ, ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 19 ವಿಜೇತೆ ಪ್ರಗತಿ ಬಡೀಗೇರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೆಪಿಸಿಸಿ ಸದಸ್ಯ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ತಾಲ್ಲೂಕು ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಮಹೇಶ್ ಆಚಾರ್ಯ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ಮಹಾದೇವ್, ಗೌರವಾಧ್ಯಕ್ಷ ಅಣ್ಣಯ್ಯಚಾರ್, ಉಪಾಧ್ಯಕ್ಷ ತಿರುನೀಲಕಂಠ, ಪ್ರಧಾನ ಕಾರ್ಯದರ್ಶಿ ಜಗದೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮಂದಿ ಉಪಸ್ಥಿತರಿದ್ದರು.