ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುಗಮ ಸಂಚರಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) 2000 ಹೆಚ್ಚುವರಿ ಬಸ್ಗಳನ್ನು ನಿಯೋಜಿಸುತ್ತಿದ್ದು ಅಕ್ಟೋಬರ್ 20 ರಿಂದ 26ರವರೆಗೆ ನಿಗಮದಿಂದ ಈ ಬಸ್‌ಗಳು ಕಾರ್ಯಾಚರಣೆಗೆ ಇಳಿಯಲಿವೆ.
ದಸರಾ ಮಹೋತ್ಸವ ಹಿನ್ನೆಯಲ್ಲಿ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುತ್ತಾರೆ. ಪ್ರವಾಸಿಗರು ಹಾಗೂ ರಜೆಗಳಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ (ವೇಗದೂತ) ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕೆಎಸ್ಆರ್ಟಿಸಿ ಕ್ರಮ ಕೈಗೊಂಡಿದೆ.
ಹೆಚ್ಚುವರಿ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಿವೆ. ಅಲ್ಲದೆ, ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ. 24 ರಿಂದ ಅ. 29 ರವರೆಗೆ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.
ರಾಜ್ಯದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ.
ಕೆಎಸ್ಆರ್ಟಿಸಿಯಿಂದ 600 ವಿಶೇಷ: ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 250 ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್.ಅಣೆಕಟ್ಟು/ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 350 ಹೆಚ್ಚುವರಿ ಬಸ್‌ಗಳು ಸೇರಿ ಒಟ್ಟಾರೆ 600 ದಸರಾ ವಿಶೇಷ ವಾಹನಗಳನ್ನು ಕಾರ್ಯಾಚರಿಸಲು ಕೆಎಸ್ಆರ್ಟಿಸಿ ಯೋಜಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ “ಫ್ಲೈ ಬಸ್” (Fly Bus) ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಇ-ಟಿಕೇಟ್ ಬುಕಿಂಗ್‌ನ್ನು www.ksrtc.karnataka.gov.in ವೆಬ್ ಸೈಟ್ ಅಥವಾ ಮೊಬೈಲ್ ಮುಖಾಂತರ ಮಾಡಬಹುದಾಗಿದೆ. ಮೈಸೂರು ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಕೆಎಸ್ಆರ್ಟಿಸಿ ಸಾರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು “ಮಾಹಿತಿ ಕೇಂದ್ರ” ವನ್ನು ಪ್ರತ್ಯೇಕವಾಗಿ ತೆರೆಯುವುದಾಗಿ ಕೆಎಸ್ಆರ್ಟಿಸಿ ತಿಳಿಸಿದೆ.
ಸಾರ್ವಜನಿಕ ಪ್ರಯಾಣಿಕರು ಕರ್ನಾಟಕ ಹಾಗೂ ನೆರೆರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳಲ್ಲಿರುವ ಒಟ್ಟು 703 ಗಣಕೀಕೃತ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳ ಮೂಲಕ ನಿಗಮದ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
ರಿಯಾಯಿತಿ ಕೊಡುಗೆ: ಹೆಚ್ಚುವರಿ ಬಸ್ ಸೇವೆಗಳ ಜೊತೆಗೆ ಒಂದೇ ಬಾರಿಗೆ 4ಕ್ಕಿಂತ ಹೆಚ್ಚಿನ ಟಿಕೆಟ್ ಖರೀದಿಸಿದರೆ 5% ರಿಯಾಯಿತಿ ಸಹ ಸಿಗಲಿದೆ. ಇದಲ್ಲದೆ, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕೆ ಅನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.