NEWSನಮ್ಮಜಿಲ್ಲೆ

ಅವರು ಹೆಚ್ಚು ಭ್ರಷ್ಟ್ರರು ಎನ್ನುವ ರಾಜಕಾರಣಿಗಳೇ ತುಂಬಿಹೋಗಿದ್ದಾರೆ: ಮುಖ್ಯಮಂತ್ರಿ ಚಂದ್ರು ಬೇಸರ

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಭ್ರಷ್ಟಾಚಾರ ಆರೋಪ ಬಂದಾಗ ನಾವು ಭ್ರಷ್ಟರಲ್ಲ ಎಂದು ಯಾರೂ ಹೇಳುತ್ತಿಲ್ಲ. ಬದಲಾಗಿ ಅವರು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆಂದು ಬೇರೆಯವರ ಮೇಲೆ ಗೂಬೆ ಕೂರಿಸುವ ರಾಜಕಾರಣಿಗಳೇ ತುಂಬಿ ಹೋಗಿದ್ದಾರೆ ಎಂದು ಆಮ್‍‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಚಂದ್ರು ಅವರು ಶನಿವಾರ ರಾಯಚೂರು ಜಿಲ್ಲಾ ಪ್ರವಾಸವನ್ನು ಮಾಡಿದರು. ಈ ವೇಳೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಶುಕ್ರವಾರ ಎರಡು ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರಿಗೆ ಸಂಬಂಧಪಟ್ಟ ಜಾಗಗಳ ಮೇಲೆ ಐಟಿ ದಾಳಿ ವಿಚಾರವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಚಂದ್ರು, ಹಿಂದಿನ ಬಿಜೆಪಿ ಸರ್ಕಾರ ಮತ್ತು ಇಂದಿನ ಕಾಂಗ್ರೆಸ್‌ ಸರ್ಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪ್ರತಿಯೊಂದು ಕಾಮಗಾರಿಯಲ್ಲೂ 40-50 ಪರ್ಸೆಂಟ್‌ ಕಮಿಷನ್‌ ತೆಗೆದುಕೊಂಡರೆ ಉತ್ತಮ ಗುಣಮಟ್ಟದ ಕೆಲಸಗಳನ್ನು ಹೇಗೆ ಮಾಡಲು ಸಾಧ್ಯ? ಉದ್ಘಾಟನೆಗೊಂಡ ಮೂರು ದಿನದಲ್ಲೇ ರಸ್ತೆಗಳು ಗುಂಡಿ ಬೀಳುತ್ತವೆ, ಚರಂಡಿಗಳು ಬಾಯ್ಬಿಟ್ಟುಕೊಳ್ಳುತ್ತವೆ ಎಂದು ಕಿಡಿಕಾರಿದರು.

ಶಿಕ್ಷಣ ಕ್ರಾಂತಿ, ಆರೋಗ್ಯ ಕ್ರಾಂತಿಗಳು ದೆಹಲಿಗಳು ಪಂಜಾಬ್‌ನಲ್ಲಿ ಆಗಿವೆ. ಆದರೆ ಇಲ್ಲಿ ಯಾಕೆ ಆಗುತ್ತಿಲ್ಲ? ಇಲ್ಲಿನ ಶೇ.60 ರಷ್ಟು ಶಾಸಕರು, ಸಂಸದರು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಮಾಲೀಕರಾಗಿದ್ದಾರೆ. ನೂರಾರು ಕೋಟಿ ಒಡೆಯರೇ ಇವತ್ತು ಶಾಸಕ, ಸಂಸದರಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಹೀಗಿರುವಾಗ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳು ಬಡವರ ಹಾಗೂ ಮಧ್ಯಮ ವರ್ಗದವರ ಕೈಗೆಟುಕುವುದು ಹೇಗೆ? ಎಂದು ಪ್ರಶ್ನಿಸಿದರು.

ನಾಡಿನ ಸಂಸ್ಕೃತಿಯನ್ನು ಕೊಲ್ಲದಿರಿ: ಕನ್ನಡ ಸಂಸ್ಕೃತಿ ಇಲಾಖೆಯನ್ನು ನಿಭಾಯಿಸಲು ಸಚಿವ ಶಿವರಾಜ್‌ ತಂಗಡಗಿ ಅವರಿಗೆ ಆಗುತ್ತಿಲ್ಲ. ಇಲಾಖೆಯಲ್ಲಿ ಐದು ಪೈಸೆ ದುಡ್ಡಿಲ್ಲ. ಒಟ್ಟು 14 ಅಕಾಡೆಮಿಗಳಿದ್ದು, ಒಂದು ಅಕಾಡೆಮಿಗೂ ಅಧಿಕಾರಿಗಳಿಲ್ಲ. 6 ಪ್ರಾಧಿಕಾರಗಳಿದ್ದು, ಅವಕ್ಕೂ ಹಣ ಇಲ್ಲದಂತಾಗಿದೆ. ದಯವಿಟ್ಟು ನಾಡಿನ ಸಂಸ್ಕೃತಿಯನ್ನು ಕೊಲ್ಲದಿರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ರಾಯಚೂರಿನಲ್ಲಿ ಏಮ್ಸ್‌ ಹೋರಾಟಕ್ಕೆ ಎಎಪಿ ಬೆಂಬಲ: ರಾಜ್ಯಕ್ಕೆ ಹತ್ತಿ, ಚಿನ್ನ, ವಿದ್ಯುತ್‌, ಆಹಾರ ಎಲ್ಲವನ್ನೂ ಕೊಡುತ್ತಿರುವ ರಾಯಚೂರು ಜಿಲ್ಲೆ ಇಂದಿಗೂ ಹಿಂದುಳಿದ ಜಿಲ್ಲೆಯಾಗಿ ಉಳಿದಿರುವುದು ದುಃಖಕರವಾಗಿದೆ. ಬಸವರಾಜ್ ಕಳಸ ನೇತೃತ್ವದಲ್ಲಿ 500 ದಿನಗಳಿಂದ ಏಮ್ಸ್ ಗಾಗಿ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಗಮನಹರಿಸದಿರುವುದು ದುರಂತ. ರಾಯಚೂರಲ್ಲಿ ಏಮ್ಸ್ ನಿರ್ಮಾಣಕ್ಕೆ ಎಲ್ಲಾ ರೀತಿಯ ಘೋಷಣೆಗಳಾದರೂ ಕೂಡ ರಾಜಕಾರಣಿಗಳ ಒತ್ತಡದಿಂದ ಇದುವರೆಗೆ ಸಾಧ್ಯವಾಗಿಲ್ಲ. ಈ ಹೋರಾಟವನ್ನು ಎಎಪಿ ಬೆಂಬಲಿಸುತ್ತದೆ. ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆಯಾಗಲೇಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಗ್ಯಾರಂಟಿಗಳ ಅವೈಜ್ಞಾನಿಕ ಅನುಷ್ಠಾನ: ದೆಹಲಿ ಮತ್ತು ಪಂಜಾಬ್‌ನಲ್ಲಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಇಲ್ಲಿನ ಚುನಾವಣೆ ಗೆಲ್ಲುವುದಕ್ಕಾಗಿ ಕಾಂಗ್ರೆಸ್‌ ಪಕ್ಷವು ಕಾಪಿ ಮಾಡಿ ಘೋಷಣೆ ಮಾಡಿತು. ಅನುಷ್ಠಾನಕ್ಕೂ ತಂದಿದೆ. ಆದರೆ ದೆಹಲಿ, ಪಂಜಾಬ್‌ ರಾಜ್ಯಗಳಲ್ಲಿ ಆದಂತೆ ಯಶಸ್ವಿಯಾಗಲಿಲ್ಲ.

ಕಾರಣ, ಕಾಂಗ್ರೆಸ್‌ ಸರ್ಕಾರವು ತರಾತುರಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಿತು. ಸರಿಯಾಗಿ ಅಧ್ಯಯನ ಮಾಡದೆ, ಅವೈಜ್ಞಾನಿಕವಾಗಿ ಅನುಷ್ಠಾನಕ್ಕೆ ತಂದಿದ್ದುದರ ಪರಿಣಾಮವನ್ನು ನಾವೀಗ ಎದುರಿಸುತ್ತಿದ್ದೇವೆ. ವಿದ್ಯುತ್‌ ಅಭಾವ ಎದುರಿಸುತ್ತಿದ್ದೇವೆ. ಸಾರಿಗೆ ಇಲಾಖೆ ತೀವ್ರ ನಷ್ಟಕ್ಕೆ ಒಳಗಾಗಿದೆ. ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನೇ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಚಂದ್ರು ಟೀಕಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನಪ್ಪ ಹಲಗೀಗೌಡರ್‌, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ, ರಾಯಚೂರು ಜಿಲ್ಲಾಧ್ಯಕ್ಷ ವೀರೇಶ್‌ ಕುಮಾರ್‌, ರಾಯಚೂರು ಜಿಲ್ಲಾ ಸೆಕ್ರೆಟರಿ ಮುಷರಫ್‌ ಸೈಯದ್‌ ಅಲಿ ಖಾನ್‌ ಉಪಸ್ಥಿತರಿದ್ದರು.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ