ಬೆಂಗಳೂರು: ಮಹಿಳಾ ಸಹೋದ್ಯೋಗಿಯೊಬ್ಬರ ನಿಂದಿಸಿ ಕಪಾಳಕ್ಕೆ ಹೊಡೆದ ಆರೋಪದಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಸನ ವಿಭಾಗದ ಹಾಸನ ಘಟಕ- ಒಂದರ ಚಾಲಕ ಕಂ ನಿರ್ವಾಹಕನ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮೆಜೆಸ್ಟಿಕ್ ಡಿಪೋ-7ರ ನಿರ್ವಾಹಕರಾದ ಶೈಲಜಾ ಎಂಬುವರ ಮೇಲೆ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕ ಕಾಂತರಾಜು ಎಂಬುವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪದಡಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಬಿಎಂಟಿಸಿ ಮಜೆಸ್ಟಿಕ್ ಘಟಕ-7ರ ನಿರ್ವಾಹಕರಾದ ಶೈಲಜಾ ಅವರು ಮಂಗಳವಾರ ತುಮಕೂರಿಗೆ ಹೋಗುವ ಸಲುವಾಗಿ ಬಸ್ ಹತ್ತಿದ್ದಾರೆ ಈ ವೇಳೆ ಟಿಕೆಟ್ ತೆಗೆದುಕೊಳ್ಳಿ ಎಂದು ಚಾಲಕ ಕಂ ನಿರ್ವಾಹಕ ಕಾಂತರಾಜು ಕೇಳಿದ್ದಾರೆ. ಆಗ ನಾನು ಸ್ಟಾಫ್ ಎಂದು ಹೇಳಿದ್ದಾರೆ. ಇದು ತಡೆರಹಿತ ಬಸ್‌ಆಗಿದೆ ಹೀಗಾಗಿ ನೀವು ಹೇಳಿದ ನಿಲ್ದಾಣದಲ್ಲಿ ನಿಲ್ಲಿಸುವುದಕ್ಕೆ ಆಗುವುದಿಲ್ಲ ಎಂದು ಕಾಂತರಾಜು ಹೇಳಿದ್ದಾರೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ಅತಿರೇಕಕ್ಕೆ ಹೋಗಿ ಚಾಲಕ ಕಂ ನಿರ್ವಾಹಕ ಕಾಂತರಾಜು ಬಿಎಂಟಿಸಿ ಕಂಡಕ್ಟರ್ ಶೈಲಜಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಹಲ್ಲೆ ಸಂಬಂಧ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಹಲ್ಲೆಗೊಳಗಾದ ಶೈಲಜಾ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನ ಸಂಬಂಧ ವಿಚಾರಿಸಲು ಇನ್ಸ್‌ಪೆಕ್ಟರ್ ಕಾಂತರಾಜುಗೆ ಫೋನ್ ಕರೆ ಮಾಡಿದಾಗ ಇನ್ಸ್‌ಪೆಕ್ಟರ್ ಅವರಿಗೂ ಕೂಡ ಕಾಂತರಾಜು ಅವಾಚ್ಯ ಪದಬಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಕೆಲಸ ಮಾಡುವ ಮಂದಿಗೆ ಸಹೋಗ್ಯೋಗಿಗಳ ಬಗ್ಗೆಯೇ ತಾತ್ಸಾರವಿದೆ ಎಂಬುವುದು ಪದೇಪದೇ ಈ ರೀತಿಯ ಘಟನೆಗಳು ನಡೆಯುವ ಮೂಲಕ ಬಹಿರಂಗವಾಗುತ್ತಲೇ ಇವೆ. ಇನ್ನಾದರೂ ನಾವೆಲ್ಲರೂ ಒಂದೇ ಸಾರ್ವಜನಿಕ ಸೇವಕರು ಎಂಬುದನ್ನು ಅರಿತು ಡ್ಯೂಟಿ ಮಾಡಿದರೆ, ಇಂಥ ಸಮಸ್ಯೆಗಳು ಬರುವುದಿಲ್ಲ. ಏಕೆ ಈ ರೀತಿ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.