ಬೆಂಗಳೂರು: ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ, ಬಿಟಿಎಂ ಲೇಔಟ್ನಿಂದ ಬನಶಂಕರಿಗೆ ಆರಂಭಿಸಲಾಗಿರುವ ನೂತನ ಮೆಟ್ರೋ ಫೀಡರ್ ಬಿಎಂಟಿಸಿ ಬಸ್ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಶನಿವಾರ ಬಿಟಿಎಂ ಲೇಔಟ್ನ ಕುವೆಂಪುನಗರ ಬಸ್ ನಿಲ್ದಾಣದಲ್ಲಿ ಮೆಟ್ರೋ ಫೀಡರ್ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಮೆಟ್ರೋ ಫೀಡರ್ ಬಸ್ಗಳ ಸೇವೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ ಮೆಟ್ರೋ ಫೀಡರ್ ಬಸ್ಗಳ ಸಂಖ್ಯೆಯನ್ನು ಕ್ರಮೇಣ ಜಾಸ್ತಿ ಮಾಡಲಾಗುತ್ತಿದೆ. ಈ ಬಸ್ಗಳು ಬಿಟಿಎಂ ಲೇಔಟ್ನಿಂದ ಮಹದೇಶ್ವರ ನಗರ, ಮಡಿವಾಳ ಕೆರೆ, ಜೆ.ಪಿ.ನಗರ 3ನೇ ಹಂತ, ದಾಲ್ಮಿಯಾ ಸರ್ಕಲ್, ಜೆ.ಪಿ.ನಗರ 6ನೇ ಹಂತದ ಮಾರ್ಗವಾಗಿ ಬನಶಂಕರಿಗೆ ಮಾರ್ಗ ಸಂಖ್ಯೆ: ಎಂಎಫ್-21 ಬಸ್’ಗಳು ಬೆಳಗ್ಗೆಯಿಂದ ರಾತ್ರಿಯವರೆಗೆ ಸಂಚರಿಸಲಿವೆ ಎಂದರು.
ನಗರದಲ್ಲಿ 73.81 ಕಿ.ಮೀ.ಮೆಟ್ರೋ ಮಾರ್ಗವಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಮೆಟ್ರೊ ನಿಲ್ದಾಣಗಳಿಂದ 30 ಮಾರ್ಗಗಳಲ್ಲಿ 121 ಅನುಸೂಚಿಗಳಿಂದ ಸದ್ಯ 1,874 ಟ್ರಿಪ್ಗಳಲ್ಲಿ ಮೆಟ್ರೋ ಫೀಡರ್ ಬಸ್ಗಳನ್ನು ಓಡಿಸಲಾಗುತ್ತಿದೆ ಎಂದು ವಿವರಿಸಿದರು.
ಬಸ್ಗಳ ಸಂಖ್ಯೆ 300ಕ್ಕೆ ಹೆಚ್ಚಳ: ಮೆಟ್ರೊ ಫೀಡರ್ ಮಾರ್ಗಗಳಲ್ಲಿ 9 ಮೀಟರ್ ಉದ್ದದ ಮಿನಿ ಬಸ್ಗಳನ್ನು ವಿಶೇಷ ರೀತಿಯಲ್ಲಿ ಬ್ರ್ಯಾಂಡಿಂಗ್ ಮಾಡಲಾಗುವುದು. ವಿವಿಧ ಯೋಜನೆಯಡಿ 120 ಎಲೆಕ್ಟ್ರಿಕ್ ಬಸ್ಗಳನ್ನು ಮೆಟ್ರೋ ಫೀಡರ್ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲಾಗುತ್ತಿದೆ. 2024ರ ಏಪ್ರಿಲ್ ಅಂತ್ಯದೊಳಗೆ 121 ಮೆಟ್ರೋ ಫೀಡರ್ ಬಸ್ಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಬಿಎಂಟಿಸಿ ಎಂಡಿ ಶ್ರೀಮತಿ ಸತ್ಯವತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಜಿ.ಎನ್.ಆರ್ ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.