ಪಿರಿಯಾಪಟ್ಟಣ: ತಾಲೂಕಿನ ಐತಿಹಾಸಿಕ ಸೀತೆಬೆಟ್ಟ ಸೇರಿದಂತೆ ಬೆಟ್ಟದಪುರ ಹಾಗೂ ಹಾರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಮಂಟಿ ಬಿಳುಗುಲಿ ಗ್ರಾಮಸ್ಥರು ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಅವರಿಗೆ ಮನವಿ ಮಾಡಿದರು.
ತಾಲೂಕಿನ ಕರಡಿಪುರ, ಸುರಗಳ್ಳಿ, ಚಿಕ್ಕನೇರಳೆ, ಬ್ಯಾಡರ ಬಿಳುಗುಲಿ, ದೇಪೂರ,ಹಲಗನಹಳ್ಳಿ, ರಾಜನಬಿಳುಗುಲಿ, ಮೂಡಲಕೊಪ್ಪಲು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಂಟಿ ಬಿಳುಗುಲಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಚಿವರಿಗೆ ಗ್ರಾಮಸ್ಥರು ಮನವಿ ಪತ್ರ ನೀಡಿದರು.
ಪಿರಿಯಾಪಟ್ಟಣ ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ತಾಲ್ಲೂಕು ಇಲ್ಲಿ ಬೆಟ್ಟದಪುರದ ಸುತ್ತಮುತ್ತಲೂ ಐತಿಹಾಸಿಕ ಕುರುಹುಗಳು ಇದ್ದು ಸೀತಾ ಬೆಟ್ಟ ಕೂಡ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಆದರೆ ಇಲ್ಲಿ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿರುವುದರಿಂದ ಐತಿಹಾಸಿಕ ಕುರುಹುಗಳು ನಾಶವಾಗುತ್ತಿರುವುದಲ್ಲದೆ, ಗಣಿಗಾರಿಕೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಬದುಕು ದುಸ್ತರವಾಗಿದೆ.
ಗಣಿಗಾರಿಕೆಯ ಧೂಳಿನಿಂದ ಬೆಳೆಗಳು ಹಾಳಾಗುತ್ತಿವೆ. ಮನೆಗಳು ಮತ್ತು ದೇವಸ್ಥಾನಗಳ ಗೋಡೆಗಳು ಬಿರುಕು ಬಿಟ್ಟಿವೆ. ಇವರು ಸಿಡಿಸುವ ಡೈನಮೈಟ್ ಹಾಗೂ ಬಾರಿ ಗಾತ್ರದ ಸಿಡಿಮದ್ದಿನ ಶಬ್ದಕ್ಕೆ ಗರ್ಭಿಣಿಯರಲ್ಲಿ, ಮಕ್ಕಳಲ್ಲಿ ಮತ್ತು ವಯೋವೃದ್ಧರಲ್ಲಿ ಶ್ರಾವಣ ದೋಷ ಉಂಟಾಗುತ್ತಿದೆ. ರೈತರು ಕನಿಷ್ಠ ಕಾಲ್ನಡಿಗೆಯಲ್ಲೂ ಸಂಚರಿಸಲು ಸಾಧ್ಯವಿಲ್ಲದಷ್ಟು ರಸ್ತೆಗಳು ಹಾಳಾಗಿವೆ.
ಹೀಗಾಗಿ ಗ್ರಾಮದ ರಸ್ತೆಗಳನ್ನು ಪರಿಶೀಲಿಸಿ ಡಾಂಬರೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆಯಿಂದ ಇದಕ್ಕೆ ಅಪಾಯ ಸಂಭವಿಸಿದರೆ ಇದರ ಮೇಲೆ ಅವಲಂಬಿತರಾಗಿರುವ ರೈತರ ಬದುಕು ಬೀದಿಗೆ ಬೀಳಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಸಚಿವ ಕೆ.ವೆಂಕಟೇಶ್ ಕಾನೂನು ಬಾಹಿರವಾಗಿ ಅವಧಿ ಮೀರಿ ಹಾಗೂ ಅನುಮತಿ ಪಡೆದ ಪ್ರದೇಶಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಕುಂಞಿ ಅಹಮದ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವುದು ನೂತನ ಬಸ್ ಚಾಲನೆ ಮತ್ತು ಕಾವೇರಿ ಕುಡಿಯುವ ನೀರಿನ ಸಂಪರ್ಕ ಸೇರಿದಂತೆ, ಸ್ಮಶಾನ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದರು. ಅಲ್ಲದೆ ತಾಲೂಕಿನ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ಹಂತ ಹಂತವಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಗ್ರಾಪಂ ಅಧ್ಯಕ್ಷರಾದ ರೇಣುಕಾ, ವೀಣಾ, ಉಪಾಧ್ಯಕ್ಷೆ ಮೀನಾಕ್ಷಿ, ಪಿಡಿಒ ರವಿಕುಮಾರ್, ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.