ಬೆಂಗಳೂರು: ಆಮ್ ಆದ್ಮಿ ಪಕ್ಷದ ಸಮಯೋಚಿತ ಪ್ರಯತ್ನದಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಈ ಹಿಂದಿನ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರವು ಕೊಡ ಮಾಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ತಡೆಯಲು ಯಶಸ್ವಿಯಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರ ಅನೇಕ ಭ್ರಷ್ಟಾಚಾರ ಬಾನಗಡಿಗಳಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ನೂರಾರು ಕೋಟಿ ಅಕ್ರಮವು ಸಹ ಒಂದಾಗಿದೆ.
ಪಕ್ಷವು ಸತತವಾಗಿ ಈ ಹಗರಣವನ್ನು ಬೆಳಕಿಗೆ ತಂದು ಆರೋಪಗಳನ್ನು ಮಾಡಿತ್ತು. ಈ ಹಗರಣಗಳಲ್ಲಿ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರ ಪಾತ್ರವನ್ನು ಎತ್ತಿ ಹಿಡಿದು ಈಗಾಗಲೇ ಸರ್ಕಾರಕ್ಕೆ ದೂರನ್ನು ಸಹ ನೀಡಲಾಗಿತ್ತು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅನೇಕ ಕಡತಗಳನ್ನು ತರಿಸಿಕೊಂಡು ಈ ಬಗ್ಗೆ ಪರಿಶೀಲನೆಯನ್ನು ಸಹ ನಡೆಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರವು ಈ ಎಲ್ಲ ಬಾನಗಡಿಗಳ ಬಗ್ಗೆ ಒಂದು ತನಿಖೆ ಮಾಡಲು ಸಮಿತಿಯನ್ನು ಈಗಾಗಲೇ ರಚಿಸಿದೆ.
ಆದರೆ ರಾಜ್ಯ ಸರ್ಕಾರದ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ರಾಮಚಂದ್ರ ಅವರ ಹೆಸರನ್ನು ನೋಡಿದ ತಕ್ಷಣ ಎಚ್ಚೆತ್ತುಕೊಂಡ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಮಂಜುಳಾ ಅವರೊಂದಿಗೆ ಮಾತನಾಡಿ ಈ ಬಗ್ಗೆ ಎಲ್ಲ ದಾಖಲೆಗಳನ್ನು ನೀಡಿ, ಈ ಬಗ್ಗೆ ತೀವ್ರ ಪ್ರತಿಭಟನೆಯನ್ನು ಸಹ ಸರ್ಕಾರದ ವಿರುದ್ಧ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದರು.
ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕೂಡಲೇ ಕಳಂಕಿತರಿಗೆ ಪಟ್ಟೆಯಿಂದ ಹೊರಗಿಟ್ಟು ಇಂದು ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಯಾವುದೇ ಪುರಸ್ಕಾರವನ್ನು ನೀಡಲಿಲ್ಲ.
ಪಕ್ಷದ ಈ ಪ್ರಯತ್ನಕ್ಕೆ ಪೂರಕವಾದ ಸರ್ಕಾರದ ಈ ನಡೆಯಿಂದಾಗಿ ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಜಯ ಸಿಕ್ಕಂತಾಗಿದೆ. ಭ್ರಷ್ಟರಿಗೆ ಯಾವುದೇ ರೀತಿಯಲ್ಲಿಯೂ ರಾಜ್ಯ ಸರ್ಕಾರದ ಈ ರೀತಿಯ ಪುರಸ್ಕಾರಗಳನ್ನು ಸಲ್ಲಿಸುವುದು ಕೆಟ್ಟ ನಡವಳಿಕೆ. ಈ ಬಗ್ಗೆ ಮುಂದಿನ ದಿವಸಗಳಲ್ಲಿ ಅಧಿಕಾರಿಗಳು ಮತ್ತು ಮಂತ್ರಿ ಮಹೋದಯರು ಎಚ್ಚೆತ್ತುಕೊಂಡು ತಮ್ಮ ನಿರ್ಧಾರಗಳನ್ನು ಮಾಡಬೇಕೆಂದು ಆಮ್ ಆದ್ಮಿ ಪಕ್ಷವು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದೆ.