- ಮತ್ತೆ ಮೈಸೂರು ಗ್ರಾಮಾಂತರ ವಿಭಾಗ ಮಾಡಿದರೆ ಸಂಸ್ಥೆಗೆ 12-15 ಕೋಟಿ ರೂ ಹೊರೆ
- ವಿಂಗಡಣೆ ಬೇಡವೆಂದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಸಾರಿಗೆ ಸಚಿವರು
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಪಡಿಸುವ ನಿಟಿನಲ್ಲಿ ಮೈಸೂರಿನ ಗ್ರಾಮಾಂತರ ವಿಭಾಗವನ್ನು ಕಳೆದ 2022ರ ಮಾರ್ಚ್‌ನಲ್ಲಿ ಮೈಸೂರು ನಗರ ವಿಭಾಗದೊಂದಿಗೆ ವಿಲೀನಗೊಳಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿಲೀನಗೊಂಡಿರುವ ಗ್ರಾಮಾಂತರ ವಿಭಾಗವನ್ನು ಮತ್ತೆ ಬೇರ್ಪಡಿಸುವ ಕೆಲಸಕ್ಕೆ ಮುಂದಾಗಿದೆ.
ಈ ಬಗ್ಗೆ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳ ಸಭೆಯನ್ನು ಇತ್ತೀಚೆಗೆ ಕರೆದು ಸಾರಿಗೆ ಸಚಿವರು ಚರ್ಚೆ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳು ಮೈಸೂರು ಗ್ರಾಮಾಂತರ ವಿಭಾಗವನ್ನು ಮಾಡಿದರೆ ಮತ್ತೆ ಸಂಸ್ಥೆಗೆ 12-15 ಕೋಟಿ ರೂಪಾಯಿ ಹೊರೆಯಾಗುತ್ತದೆ. ಹೀಗಾಗಿ ಈಗ ಇರುವಂತೆ ಬಿಟ್ಟರೆ ಸಂಸ್ಥೆಗೆ ಆರ್ಥಿಕ ಬಲ ತುಂಬಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಅಲ್ಲದೆ ಗ್ರಾಮಾಂತರ ವಿಭಾಗ ಮಾಡಿದರೆ, ಒಬ್ಬರು ವಿಭಾಗೀಯ ನಿಯಂತ್ರಣಾಧಿಕಾರಿ, ಒಬ್ಬ ಡಿಟಿಒ, ಒಬ್ಬ ಡಿಎಂಇ ಹೀಗೆ ಹತ್ತಾರು ಹುದ್ದೆಗಳನ್ನು ಸೃಷ್ಟಿಸಬೇಕು. ಜತೆಗೆ ಕಚೇರಿ, ಕಚೇರಿಗೆ ಪೀಠೋಪಕರಣಗಳು, ಕಚೇರಿ ಸಿಬ್ಬಂದಿ ಅಂತ ಬಹುಳಷ್ಟು ಹಣ ಖರ್ಚಾಗಲಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದ್ದಾರೆ.
ಈ ವೇಳೆ ಹಠಕ್ಕೆ ಬಿದ್ದವರಂತೆ ವರ್ತಿಸಿರುವ ಸಾರಿಗೆ ಸಚಿವರು ಇದೆಲ್ಲವನ್ನು ನಿಮ್ಮ ಮನೆಯಿಂದ ಮಾಡುತ್ತಿದ್ದೀರೆಂದ್ರಿ ಸಂಸ್ಥೆಯಿಂದ ಮಾಡುತ್ತಿರುವುದಲ್ವಾ? 15 ಕೋಟಿ ಇಲ್ಲ ಅಂದ್ರೆ 18 ಕೋಟಿ ರೂ.ಗಳೇ ಆಗಲಿ ಸುಮ್ಮನೆ ಗ್ರಾಮಾಂತರ ವಿಭಾಗ ಮಾಡುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಗದರಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸಾರಿಗೆ ನಿಗಮದ ಒನ್ ಮ್ಯಾನ್ ಕಮಿಟಿ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಅವರ ಸಲಹೆ ಮೇರೆಗೆ ಸಂಸ್ಥೆಗೆ ಆಗುತ್ತಿದ್ದ ಆರ್ಥಿಕ ನಷ್ಟ ತಗ್ಗಿಸಲು ಅಂದಿನ ಬಿಜೆಪಿ ಸರ್ಕಾರ ಗ್ರಾಮಾಂತರ ವಿಭಾಗವನ್ನು ನಗರ ವಿಭಾಗದೊಂದಿಗೆ ವಿಲೀನ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ತಮಗೆ ನಿಷ್ಠೆಯಿಂದ ಇರುವವರನ್ನು ಉನ್ನತ ಸ್ಥಾನದಲ್ಲಿ ಕೂರಿಸುವ ಉದ್ದೇಶದಿಂಶ ಮತ್ತೆ ವಿಂಗಡಣೆ ಮಾಡಲು ಮುಂದಾಗಿದೆ. ಇದು ಸಂಸ್ಥೆಗೆ ಪ್ರತಿ ವರ್ಷ 12-15 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ.
ಇನ್ನು ಗ್ರಾಮಾಂತರ ವಿಭಾಗವನ್ನು ವಿಲೀನ ಮಾಡಿದ್ದರಿಂದ ಹಲವಾರು ರೂಟ್‌ಗಳನ್ನು ರದ್ದು ಮಾಡಬೇಕಾಯಿತು ಎಂಬ ಸಬೂಬು ಹೇಳಿದ್ದಾರೆ. ರೂಟ್‌ಗಳು ರದ್ದಾಗಿರುವುದು ವಿಲೀನದಿಂದ ಅಲ್ಲ ನಿವೃತ್ತರಾದ ಚಾಲಕರು ಮತ್ತು ನಿರ್ವಾಹಕರ ಜಾಗಕ್ಕೆ ನೇಮಕ ಮಾಡಿಕೊಳ್ಳದೆ, ನೌಕರರ ಕೊರತೆಯಾಗಿರುವುದರಿಂದ. ಈ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಮಾಧ್ಯಮಗಳನ್ನು ದಾರಿ ತಪ್ಪಿಸಲು ಈ ಹೇಳಿಕೆ ನೀಡುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ ನಷ್ಟದಲ್ಲಿ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ವೆಚ್ಚ ಕಡಿತ ಹಾಗೂ ಇನ್ನಿತರ ಉದ್ದೇಶಗಳಿಂದ 2022ರ ಮಾರ್ಚ್ ನಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳನ್ನು ವಿಲೀನಗೊಳಿಸಿ ಜಿಲ್ಲೆಗೆ ಒಂದೇ ವಿಭಾಗವನ್ನು ಮಾಡಲಾಗಿದೆ. ಹೀಗಾಗಿ ನಿಗಮದ ನಾನಾ ಹಂತಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ. ಮಾತ್ರವಲ್ಲದೇ ಸಿಟಿ ಡಿಪೊ ಹಾಗೂ ಗ್ರಾಮಾಂತರ ಡಿಪೊಗಳನ್ನು ರದ್ದುಗೊಳಿಸಲಾಗಿದೆ. ಈ ವೇಳೆ ಅಂದಾಜು 150 ವಾಹನಗಳನ್ನು ಬೇರೆ ಡಿಪೊಗಳೊಂದಿಗೆ ವಿಲೀನಗೊಳಿಸಲಾಗಿದೆ.
ಈಗ ನಿಗಮಕ್ಕೆ ವೆಚ್ಚ ಕಡಿಮೆಯಾಗಿ ಆಡಳಿತಾತ್ಮಕವಾಗಿ ಒಂದಷ್ಟು ಸುಧಾರಣೆಯಾಗಿದೆ. ಆದರೆ, ಕೆಎಸ್‌ಆರ್‌ಟಿಸಿ ನಗರ ವ್ಯಾಪ್ತಿಯಲ್ಲಿ ನೀಡುತ್ತಿದ್ದ ಸೇವೆಯಲ್ಲಿ ಹಿನ್ನಡೆಯಾಗಿದ್ದು, ಸುಮಾರು 150 ಮಾರ್ಗಗಳ ಸೇವೆ ರದ್ದಾಗಿವೆ. ಮಾತ್ರವಲ್ಲದೇ ನಾನಾ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಸಬೂಬು ಹೇಳಲಾಗುತ್ತಿದೆ.
ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ನಿತ್ಯವೂ ಒಟ್ಟು 4.90 ಲಕ್ಷ ಮಂದಿ ಕೆಎಸ್‌ಆರ್‌ಟಿಸಿ ಸೇವೆ ಪಡೆಯುತ್ತಿದ್ದಾರೆ. ಅಂದಾಜು 1.25 ಲಕ್ಷ ವಿದ್ಯಾರ್ಥಿಗಳು, 60,000 ಕೂಲಿ ಕಾರ್ಮಿಕರು ಈ ಸೇವೆಯನ್ನೇ ಆಶ್ರಯಿಸಿದ್ದಾರೆ. ಶಕ್ತಿ ಯೋಜನೆ ಅನುಷ್ಠಾನಗೊಂಡ ಬಳಿಕ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಿತ್ಯವೂ ಗ್ರಾಮಾಂತರ ಪ್ರದೇಶಗಳಿಗೂ ಉತ್ತಮ ಸಾರಿಗೆ ಸೇವೆ ನೀಡಬೇಕಿದೆ. ಆದರೆ, ವಿಲೀನದಿಂದಾಗಿ ಎರಡೂ ವಿಭಾಗಕ್ಕೂ ಸಮಾನ ಆದ್ಯತೆ ನೀಡಿ ನಾಗರಿಕರಿಗೆ ಉತ್ತಮ ಸೇವೆ ನೀಡುವ ಸನ್ನಿವೇಶ ದೂರಾವಾಗಿದೆ ಎಂಬ ಕುಂಟು ನೆಪವನ್ನು ಮುಂದಿಡುತ್ತಿದ್ದಾರೆ.
ಒಂದು ವಿಭಾಗದಿಂದ ಮೈಸೂರು ಜಿಲ್ಲೆಗೆ ಸಮರ್ಪಕವಾಗಿ ಬಸ್ ಸೇವೆ ನೀಡಲಾಗುತ್ತಿಲ್ಲ ಎಂದರೆ, ರಾಜ್ಯದ ಸುಮಾರು 7 ಕೋಟಿ ಜನರ ಸೇವೆ ಮಾಡುವುದಕ್ಕೆ ಒಬ್ಬ ಮುಖ್ಯಮಂತ್ರಿಯಿಂದ ಸಾಧ್ಯನಾ? ಹಾಗಾದರೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಿಭಾಗ ಅಂಥ ರಾಜ್ಯವನ್ನು ವಿಂಗಡಿ ನಾಲ್ಕು ಮಂದಿ ಮುಖ್ಯಮಂತ್ರಿಗಳ ಪದವಿಯನ್ನು ಸೃಷ್ಟಿಸಬೇಕಾಗುತ್ತದೆ ಅಲ್ಲವೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಈ ರೀತಿ ಕೆಲಸಕ್ಕೆ ಬಾರದ ಸಬೂಬು ಹೇಳಿಕೊಂಡು ಗ್ರಾಮಾಂತರ ವಿಭಾಗವನ್ನು ಮಾಡುವ ಕೆಲಸವನ್ನು ಬಿಟ್ಟು ಕೆಎಸ್‌ಆರ್‌ಟಿಸಿ ನಿಗಮವು ಆರ್ಥಿಕವಾಗಿ ಸದೃಢವಾಗಿಸುವತ್ತ ಮತ್ತು ನೌಕರರಿಗೆ ತಕ್ಕ ವೇತನವನ್ನು ಕಾಲ ಕಾಲಕ್ಕೆ ಹೆಚ್ಚಿಸುವತ್ತ ಗಮನಕೊಡಿ ಎಂದು ಸಾರಿಗೆ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಜನರು.