ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಭಾರಿ ಮೊತ್ತದ ಅಂದರೆ 10 ಕೋಟಿ ರೂಪಾಯಿಗೂ ಹೆಚ್ಚು ಬಿಟ್ ಕಾಯಿನ್ ದಂಧೆ ಅವ್ಯಹತವಾಗಿ ನಡೆದ ಬಗ್ಗೆ ಕಳೆದ ಅಕ್ಟೋರ್ 11ರಂದೆ ಭಾರಿ ಸುದ್ದಿಯಾಗಿತ್ತು. ಆ ವೇಳೆ ಬಿಎಂಟಿಸಿ ಜಾಗ್ರತೆ ಮತ್ತು ಭದ್ರತಾಧಿಕಾರಿಗಳು ಬಿರುಸಿನಿಂದಲೇ ಪ್ರಕರಣದ ವಿಚಾರಣೆ ನಡೆಸಿದರು.
ಅಂದು ಬಿಟ್ ಕಾಯಿನ್ ದಂಧೆಯಲ್ಲಿ ತೊಡಗಿರುವ ಕಿಂಗ್‌ಪಿನ್‌ಗಳು ಮತ್ತು ವಂಚನೆಗೆ ಒಳಗಾದ ಸಂಸ್ಥೆಯ ನೌಕರರನ್ನು ವಿಚಾರಣೆ ನಡೆಸಿದರು. ಆನಂತರ ಅಂದರೆ ಈವರೆಗೂ ಈ ಪ್ರಕರಣ ಯಾವ ಮಟ್ಟದಲ್ಲಿದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ವಂಚನೆಗೆ ಒಳಗಾದ ನೌಕರರು ಕಣ್ಣೀರು ಹಾಕುತ್ತಿದ್ದಾರೆ.
ಹೆಬ್ಬಾಳದ ಬಿಎಂಟಿಸಿ 28ನೇ ಘಟಕದಲ್ಲಿ ಸುಮಾರು 100 ಮಂದಿ ನೌಕರರಿಂದ ತಲಾ ಒಂದು ಕಾರ್ಡ್‌ಗೆ 1.70 ಲಕ್ಷ ರೂಪಾಯಿಯನ್ನು ತೊಡಗಿಸಿಕೊಂಡಿದ್ದಾರೆ. ಅದಕ್ಕೆ ಪ್ರಕಾಶ್ ಮತ್ತು ಸುರೇಶ್ ಎಂಬುವರು ಕಿಂಗ್‌ಪಿನ್‌ಗಳಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ನಿಗಮದ ಎಸ್‌ಅಂಡ್‌ವಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ನಿಗಮದ ದೊಡ್ಡದೊಡ್ಡ ಅಧಿಕಾರಿಗಳ ಹೆಸರನ್ನು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ಮಾಡಲು ಹೊರಟ ಎಸ್‌ಅಂಡ್‌ವಿ ಅಧಿಕಾರಿಗಳಿಗೆ ಆರೋಪ ಕೇಳಿ ಬಂದಿರುವ ಉನ್ನತ ಮಟ್ಟದ ಅಧಿಕಾರಿಗಳ ವಿಚಾರಣೆ ಮಾಡದಂತೆ ಮೇಲಿನಿಂದ ಒತ್ತಡ ಬಂದಿದೆ. ಹೀಗಾಗಿ ಸುಮಾರು ಎರಡು ತಿಂಗಳಿಂದ ದಂಧೆಯ ಪ್ರಕರಣ ಕುಂಟುತ್ತಲೇ ಇದೆ.
ಇನ್ನು ಬಿಟ್‌ಕಾಯಿನ್ ದಂಧೆಯ ಬಗ್ಗೆ ಆರೋಪ ಕೇಳಿ ಬಂದಿರುವ ಅಧಿಕಾರಿಗಳು ಮತ್ತು ನೌಕರರ ಬ್ಯಾಂಕ್ ಅಕೌಂಟ್ ನೋಡಿದರೆ ಸತ್ಯ ಬಹಿರಂಗವಾಗಲಿದೆ. ಆದರೆ ಅದಕ್ಕೆ ನಿಗಮದ ಉನ್ನತ ಅಧಿಕಾರಿಗಳು ಅವಕಾಶ ಮಾಡಿಕೊಡುತ್ತಿಲ್ಲ ಎಂಬ ಆರೋಪದ ಜತೆಗೆ ಇದು ವಿಧಾನಸೌಧದಲ್ಲಿರುವ ಅಧಿಕಾರಿಗಳು ಕೆಲ ಸಚಿವರಿಂದಲೂ ಒತ್ತಡ ಹಾಕಿಸುತ್ತಿದ್ದಾರೆ ಎಂಬ ಆರೋಪವಿದೆ.
ಅಕ್ಟೋಬರ್ ಮೊದಲ ವಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಬನಶಂಕರಿ ಬಿಎಂಟಿಸಿ 20ನೇ ಘಟಕದ 10 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಜಯನಗರ 4ನೇ ಘಟಕದಲ್ಲೂ 16ಕ್ಕೂ ಹೆಚ್ಚು ಮಂದಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ವಿಚಾರಣೆ ನಡೆಯುತ್ತಿದ್ದು, ಅದು ಇನ್ನೂ ಹೊರಬಂದಿಲ್ಲ.
8 ಕೋಟಿ ರೂ.ಗಳಿಗೂ ಹೆಚ್ಚಿನ ದಂಧೆ 28 ಮತ್ತು 7ನೇ ಘಟಕದಲ್ಲಿ ನಡೆದಿದ್ದು, ಈ ಘಟಕಗಳ ಕಿಂಗ್‌ಪಿನ್‌ಗಳನ್ನು ವಿಚಾರಣೆ ನಡೆಸಿದರೂ ಅವರನ್ನು ಅಮಾನತು ಮಾಡುವ ಯಾವುದೇ ರೀತಿಯ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಿಎಂಟಿಸಿ 28ನೇ ಘಟಕ ಮತ್ತು ಕೆಂಪೇಗೌಡ ಬಸ್‌ನಿಲ್ದಾಣದಲ್ಲಿರುವ ಘಟಕ 7ರಲ್ಲೂ ಡಿಪೋ ಮಟ್ಟದ ಅಧಿಕಾರಿಗಳು ತೊಡಗಿರುವುದೂ ಅಲ್ಲದೆ 100ಕ್ಕೂ ಹೆಚ್ಚು ನೌಕರರನ್ನು ಈ ದಂಧೆಗೆ ಸಿಲುಕಿಸಿದ್ದು, ಏನು ಅರಿಯದ ನೌಕರರು ಅಧಿಕಾರಿಗಳ ಮಾತು ಮೀರಲಾರದೆ 1.70 ಲಕ್ಷ ರೂ.ಗಳಿಂದ 27.2 ಲಕ್ಷ ರೂಪಾಯಿವರೆಗೂ ಹಾಕಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ನೌಕರರಿಗೆ ಮೊದಲು ನೀವು ಒಂದು ಕಾರ್ಡ್‌ಗೆ 1.70 ಲಕ್ಷ ಹಾಕಿದರೆ ನಿಮಗೆ ವರ್ಷದಲ್ಲೇ 7 ಲಕ್ಷ ರೂಪಾಯಿ ವರೆಗೂ ಸಿಗುತ್ತದೆ ಎಂದು ಆಸೆ ಹುಟ್ಟಿಸಿ ಈ ರೀತಿ ಹಣ ತೊಡಗಿಸಲು ಪ್ರೇರೇಪಿಸಿದ್ದಾರೆ. ನಮ್ಮ ಬಳಿ ಹಣವಿಲ್ಲ ಎಂದ ನೌಕರರಿಗೆ ಪಿಎಫ್ ಮತ್ತು ಸೈಟ್ ಲೋನ್ ತೆಗೆಸಿ ಆ ಹಣವನ್ನು ಇದಕ್ಕೆ ತೊಡಗಿಸಿದ್ದಾರೆ.
ಇನ್ನು ಕೆಲ ನೌಕರರು ತಮ್ಮ ಆಭರಣಗಳನ್ನು ಬ್ಯಾಂಕ್‌ಗಳಲ್ಲಿ ಗಿರವಿಯಿಟ್ಟು ಮತ್ತು ಶೇ.5 ರೂ.ವರೆಗೆ ಬಡ್ಡಿಗೆ ಹಣ ತಂದು ಕಟ್ಟಿದ್ದಾರೆ. ಆದರೆ ಈಗ ಬಿಟ್ ಕಾಯಿನ್‌ಗೆ ತೊಡಗಿಸಿದ್ದ ಹಣ ವಾಪಸ್ ಕೊಡದೆ ವಂಚನೆ ಮಾಡಿದ್ದಾರೆ ಎಂಬ ಬಗ್ಗೆ ಹಣ ಕಳೆದುಕೊಂಡ ನೌಕರರು ಗೋಳಾಡುತ್ತಿದ್ದು, ಹೇಗಾದರೂ ಮಾಡಿ ಹಣ ವಾಪಸ್ ಕೊಡಿಸಿ ಎಂದು ನಿಗಮದ ಎಸ್‌ಅಂಡ್‌ವಿ ಅಧಿಕಾರಿಗಳ ಬಳಿ ಬೇಡಿಕೊಳ್ಳುತ್ತಿದ್ದಾರೆ.