ಬೆಂಗಳೂರು ಗ್ರಾಮಾಂತರ: ಪ್ರತಿಯೊಬ್ಬ ವ್ಯಕ್ತಿಗೂ ನೈಸರ್ಗಿಕವಾಗಿ ಮಾನವ ಹಕ್ಕುಗಳು ಬಂದಿರುತ್ತವೆ, ಆ ಹಕ್ಕುಗಳನ್ನು ಉಲ್ಲಂಘನೆ ಮಾಡದೇ, ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಆಗಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್ ಹೇಳಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ 75 ನೇ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ರಕ್ಷಣೆ ನೀಡುವ ಹಕ್ಕುಗಳನ್ನು ವಿವರಿಸಲಾಗಿದೆ. ಜೀವನದ ಸ್ವಾತಂತ್ರ್ಯ ಸಮಾನತೆ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳೇ ಮಾನವ ಹಕ್ಕುಗಳು, ಎಲ್ಲಾ ಮಾನವರು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನರು ಮತ್ತು ಪ್ರತಿಯೊಬ್ಬರೂ ಯಾವುದೇ ತರಹದ ತಾರತಮ್ಯ ಇಲ್ಲದೆ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಹೊಂದುವ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ. ಪ್ರತಿನಿತ್ಯ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತಿವೆ. ಸಂವಿಧಾನ ಅಡಿಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಮಾಡುವ ಮೂಲಕ ಉಲ್ಲಂಘನೆಯಾಗದ ಹಾಗೇ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ದೂರು ಸಲ್ಲಿಸಿ: ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಎಲ್ಲ ಸಾರ್ವಜನಿಕ ಸಂಸ್ಥೆಗಳ ಆದ್ಯ ಕರ್ತವ್ಯ. ರಾಜ್ಯದ ಯಾವುದೇ ಸಾರ್ವಜನಿಕ ಕಚೇರಿಯಿಂದಾಗಲಿ ಅಥವಾ ಸಂಸ್ಥೆಯಿಂದಾಗಲಿ ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭದಲ್ಲಿ, ತೊಂದರೆಗೆ ಒಳಗಾದವರಾಗಲೀ ಅಥವಾ ಆತನ/ಆಕೆಯ ಪರವಾಗಿ ಬೇರೆ ಯಾರಾದರೂ ಸಮಸ್ಯೆ ಪರಿಹರಿಸಲು, ನ್ಯಾಯ ದೊರಕಿಸಿಕೊಳ್ಳಲು ಮಾನವ ಹಕ್ಕುಗಳ ಆಯೋಗಕ್ಕೆ ಯಾವುದೇ ಖರ್ಚಿಲ್ಲದೆ ಉಚಿತವಾಗಿ ದೂರು ನೀಡಬಹುದು ಎಂದು ತಿಳಿಸಿದರು.
ದೂರು ಸಲ್ಲಿಸಲು ನಿಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್ ಮುಖಾಂತರ”ಮಾನವ ಹಕ್ಕು ರಕ್ಷಣೆ” ಎಂಬ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಂಡು ಸಲ್ಲಿಸಬಹುದು, ಅಥವಾ https://kshrc.karnataka.gov.in ಮಾನವ ಹಕ್ಕುಗಳ ಆಯೋಗದ ವೆಬ್ಸೈಟ್ ಮೂಲಕ ದೂರು ಸಲ್ಲಿಸಬಹುದು ಅಥವಾ ದೂರು ನಿರ್ವಹಣಾ ವ್ಯವಸ್ಥೆಯ ವೆಬ್ಸೈಟ್ www.hrcnet.nic.in ಆನ್ಲೈನ್ ಮೂಲಕ ಸಲ್ಲಿಸಬಹುದು.
ಇದು ಇಲ್ಲ ಎಂದರೆ ಸ್ಪಷ್ಟವಾಗಿ ಸರಳವಾಗಿ ಸಂಪೂರ್ಣ ವಿವರನ್ನೊಳಗೊಂಡ ಒಂದು ಪತ್ರದ ಮುಖಾಂತರ ಅಥವಾ ಆಯೋಗದ ಸರಳ ನಮೂನೆ ಮುಖಾಂತರ “ಕರ್ನಾಟಕ ಮಾನವ ಹಕ್ಕುಗಳ ಆಯೋಗ ಗೇಟ್-05, ಎಂ.ಎಸ್ ಬಿಲ್ಡಿಂಗ್, ಡಾ.ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಖುದ್ದಾಗಿ ಭೇಟಿ ನೀಡಿ ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 180042523333, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ದೂರವಾಣಿ ಸಂಖ್ಯೆ 080-22392201 ಗಳನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಹೇಳಿದರು.
ವಕೀಲ ಚಂದ್ರರೆಡ್ಡಿ ಮಾತನಾಡಿ, ಮೂಲಭೂತ ಹಕ್ಕುಗಳು ಹಾಗೂ ಮಾನವ ಹಕ್ಕುಗಳು ಒಂದಕ್ಕೊಂದು ಸಾಮ್ಯತೆ ಇದೆ, ಮಾನವ ಹಕ್ಕುಗಳ ಸಂರಕ್ಷಣೆ ಕಾಯ್ದೆ-1993ರ ಅಡಿಯಲ್ಲಿ ಮಾನವ ಹಕ್ಕುಗಳ ರಕ್ಷಣೆಯನ್ನು ಮಾಡಲಾಗುತ್ತಿದೆ. ಜೀವಿಸುವ ಹಕ್ಕು, ಆರೋಗ್ಯ ಹಕ್ಕು, ಶಿಕ್ಷಣ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ ಹಕ್ಕು, ಶೋಷಣೆ ವಿರುದ್ಧ ಹಕ್ಕು ಸೇರಿದಂತೆ ಎಲ್ಲಾ ಮಾನವ ಹಕ್ಕುಗಳ ಬಗ್ಗೆ ವಿವರಿಸಿ, ಮಾನವ ಹಕ್ಕುಗಳು ಉಲ್ಲಂಘನೆಯಾದಾಗ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ವಕೀಲರಾದ ಚಿನ್ನಮ್ಮ ಮಾತನಾಡಿ, 75 ನೇ ಮಾನವ ಹಕ್ಕುಗಳ ದಿನಾಚರಣೆಯನ್ನು ಸ್ವಾತಂತ್ರ್ಯ, ಸಮಾನತೆ, ಎಲ್ಲರಿಗೂ ನ್ಯಾಯ ಎಂಬ ಧ್ಯೇಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದು, ರಕ್ಷಣೆ ಮಾಡುವುದು ಇದರ ಉದ್ದೇಶವಾಗಿದೆ. ವಿಕಲಚೇತನರು, ಸ್ಥಳಿಯರು, ವಲಸಿಗರನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಇನ್ನು ಸಾಮಾನ್ಯವಾಗಿ ಕೌಟುಂಬಿಕ ಕಲಹಗಳು ಉಂಟಾದಾಗ ನೇರವಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಅಥವಾ ಪೊಲೀಸ್ ಸ್ಟೇಷನ್‌ಗೆ ದೂರು ನೀಡದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಸಖಿ ಕೇಂದ್ರಗಳಲ್ಲಿ ಬಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಹಾಗೆಯೇ ಕಾನೂನು ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜಿಲ್ಲಾ ಕಾನೂನು ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಕಾನೂನು ಸೇವೆಯನ್ನು ಪಡೆಯಬಹುದು ಎಂದು ಹೇಳಿದರು.
ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅನಿತಾ ಲಕ್ಷ್ಮಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್ ಅವರು ಮಾನವ ಹಕ್ಕುಗಳ ದಿನಾಚರಣೆಯ “ಪ್ರತಿಜ್ಞಾ ವಿಧಿ” ಯನ್ನು ಬೋಧಿಸಿದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.