ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ಗಳಲ್ಲಿ ಡಿಜಿಟಲ್ ಪಾವತಿ ವಿಧಾನದ ಮೂಲಕ ಟಿಕೆಟ್ಗಳನ್ನು ನೀಡುವ ಮೂಲಕ ಹೊಸ ಪ್ರಗತಿ ಸಾಧಿಸಲು ಮುಂದಡಿ ಇಟ್ಟಿದೆ.
ಸದ್ಯಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಐದು ಡಿಪೋಗಳಿಂದ 415 ದೀರ್ಘ ಮಾರ್ಗದ ಬಸ್ಗಳು ಯುಪಿಐ ಮೂಲಕ ಪ್ರಯಾಣಿಕರಿಗೆ ಟಿಕೆಟ್ಗಳನ್ನು ನೀಡುತ್ತಿವೆ. ಪ್ರಯಾಣಿಕರ ಅಗತ್ಯತೆ ಪೂರೈಸುವ ಸಂಸ್ಥೆ ಶೀಘ್ರದಲ್ಲೇ ತನ್ನ ವ್ಯಾಪ್ತಿಯಲ್ಲಿರುವ ಎಲ್ಲ 4,581 ಬಸ್ಗಳಿಗೆ ಡಿಜಿಟಲ್ ಪಾವತಿ ವಿಧಾನವನ್ನು ವಿಸ್ತರಿಸಲು ಉದ್ದೇಶಿಸಿದೆ.
2020 ರಿಂದ ಬಸ್ಗಳಲ್ಲಿ ಡಿಜಿಟಲ್ ಪಾವತಿ (ಕ್ಯೂಆರ್ ಕೋಡ್ ರೀಡಿಂಗ್ ಬಳಸಿ) ಮಾಡುವುದು ಯಶಸ್ವಿಯಾಗಿ ಜಾರಿಗೆ ತಂದ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ನಂತರ ಬಸ್ಗಳಲ್ಲಿ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಪ್ರಾರಂಭಿಸಿದ ಕರ್ನಾಟಕದಲ್ಲಿ NWKRTC ಎರಡನೆಯದ್ದಾಗಿದೆ.
ಪ್ರತಿ ತಿಂಗಳು ಬಿಎಂಟಿಸಿಯ ಆನ್ಲೈನ್ ಪಾವತಿ ವಹಿವಾಟು ಸುಮಾರು 4.5 ಕೋಟಿ ರೂ.ಗಳಾಗಿದ್ದರೆ, ತಿಂಗಳಿಗೆ ನಗದು ವಹಿವಾಟು 13 ಕೋಟಿಯಿಂದ 18 ಕೋಟಿ ರೂ. ಆಗಿದೆ. ಆದಾಗ್ಯೂ, ಇತರ ಕರ್ನಾಟಕ ರಾಜ್ಯ ನಿಗಮಗಳು ಮತ್ತು ಕಲ್ಯಾಣ ಕರ್ನಾಟಕ ಈ ಸೌಲಭ್ಯವನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಪ್ರಾರಂಭಿಸಿಲ್ಲ.
NWKRTC ಸೆಪ್ಟೆಂಬರ್ 1 ರಂದು ಪ್ರಾಯೋಗಿಕವಾಗಿ ಡಿಜಿಟಲ್ ಪಾವತಿ ಸೇವೆಯನ್ನು (ಸ್ಟ್ಯಾಟಿಕ್ ಕ್ಯೂಆರ್ ಕೋಡ್ ರೀಡಿಂಗ್) ಪ್ರಾರಂಭಿಸಿತು. ಇದಕ್ಕೆ ದೊರೆತ ಸಕಾರಾತ್ಮಕ ಸ್ಪಂದನೆಯನ್ನು ಗಮನಿಸಿದ ಅಧಿಕಾರಿಗಳು ಪ್ರಾಯೋಗಿಕ ಯೋಜನೆಯನ್ನು ನವೆಂಬರ್ 1 ರಂದು ಇನ್ನೂ ಐದು ಡಿಪೋಗಳಿಗೆ ವಿಸ್ತರಿಸಿದರು.
ಇಲ್ಲಿಯವರೆಗೆ, 415 ಬಸ್ಗಳಲ್ಲಿ ಕಂಡಕ್ಟರ್ಗಳು 30,000 ವೈಯಕ್ತಿಕ ವಹಿವಾಟುಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು 75 ಲಕ್ಷ ರೂಪಾಯಿಗಳನ್ನು ನೇರವಾಗಿ NWKRTC ಖಾತೆಗೆ ವರ್ಗಾಯಿಸಿದ್ದಾರೆ. “ಡಿಜಿಟಲ್ ಪಾವತಿ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಚಿಲ್ಲರೆ ಹಿಂದಿರುಗಿಸುವುದು ಮತ್ತು ಉನ್ನತ ಅಧಿಕಾರಿಗಳಿಗೆ ದಿನ ಲೆಕ್ಕ ನೀಡುವುದು” ತಪ್ಪಿದ್ದು, ಇದು ಉತ್ತಮ ಬೆಳವಣಿಗೆ ಎಂದು ನಿರ್ವಾಹಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಸ್ಗಳಲ್ಲಿ ಆನ್ಲೈನ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಲು ಖಾಸಗಿ ಸಂಸ್ಥೆ (ಫೋನ್-ಪೆ) ಅವರನ್ನು ಸಂಪರ್ಕಿಸಿದೆ. ಕಂಪನಿಯು ಕಂಡಕ್ಟರ್ಗಳಿಗೆ ಕ್ಯೂಆರ್ ಕೋಡ್ಗಳನ್ನು ನೀಡಿದ್ದು, ವಹಿವಾಟುಗಳನ್ನು ಉಚಿತವಾಗಿ ಮೇಲ್ವಿಚಾರಣೆ ಮಾಡಲು ಪ್ರಧಾನ ಕಚೇರಿಯಲ್ಲಿ ಲೈವ್ ಡ್ಯಾಶ್ಬೋರ್ಡ್ ಅನ್ನು ಸಹ ಸ್ಥಾಪಿಸಿದೆ. ಇನ್ನು ಇಲ್ಲಿಯವರೆಗೆ, ವ್ಯವಹಾರಗಳು ಸುಗಮವಾಗಿ ಮತ್ತು ಯಾವುದೇ ತೊಂದರೆಗಳಿಲ್ಲದೆ ನಡೆಯುತ್ತಿವೆ ಎಂದು NWKRTC ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ್ ತಿಳಿಸಿದ್ದಾರೆ.
ಬಿಎಂಟಿಸಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರಯಾಣಿಕರಿಗೆ ದೈನಂದಿನ, ವಾರ ಮತ್ತು ಮಾಸಿಕ ಪಾಸ್ಗಳನ್ನು ನೀಡುತ್ತಿದೆ. ಪ್ರತಿ ತಿಂಗಳು ಬಿಎಂಟಿಸಿ ನೀಡುವ ಒಂದು ಲಕ್ಷ ಪ್ಲಸ್ ಪಾಸ್ಗಳಲ್ಲಿ ಅವುಗಳಲ್ಲಿ ಸುಮಾರು 25% ಅನ್ನು ಆನ್ಲೈನ್ನಲ್ಲೇ ಪಡೆದುಕೊಳ್ಳುತ್ತಿದ್ದಾರೆ.
ಕೆಎಸ್ಆರ್ಟಿಸಿ ರಾಜ್ಯದ ಅತಿದೊಡ್ಡ ಬಸ್ ಜಾಲವನ್ನು ಹೊಂದಿರುವ ನಿಗಮವಾಗಿದ್ದು, ಇದು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಒದಗಿಸಲು ಯೋಜಿಸಿದೆ. ಅದು ಕಂಡಕ್ಟರ್ಗಳಿಗೆ ಕಾರ್ಡ್ ಅಥವಾ ಯುಪಿಐ ವಿಧಾನದ ಮೂಲಕ ಟಿಕೆಟ್ಗಳನ್ನು ನೀಡಲು ಅನುವು ಮಾಡಿಕೊಡಲಿದೆ.ಪ್ರಸ್ತುತ, ಕೆಎಸ್ಆರ್ಟಿಸಿಯಲ್ಲಿ ಆನ್ಲೈನ್ ವಹಿವಾಟುಗಳಿಗಾಗಿ ಆಯ್ದ ಬಸ್ ಟರ್ಮಿನಲ್ಗಳಲ್ಲಿ 89 ಪಾಯಿಂಟ್ ಆಫ್ ಸೇಲ್ (POS) ಯಂತ್ರಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ.
ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಈವರೆಗೂ ಯಾವುದೇ ಆನ್ಲೈನ್ ಪಾವತಿ ಸೇವೆಯನ್ನು ಹೊಂದಿಲ್ಲ. ಆದರೆ, ಪ್ರಯಾಣಿಕರಿಗೆ ಈ ಸೇವೆ ಒದಗಿಸಲು ಬ್ಯಾಂಕ್ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಅತೀ ಶೀಘ್ರದಲ್ಲೇ ತೀರ್ಮಾನತೆಗೆದುಕೊಳ್ಳಲಿದ್ದೇವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದ್ದಾರೆ.