NEWSನಮ್ಮಜಿಲ್ಲೆನಮ್ಮರಾಜ್ಯ

ಕೇವಲ ಒಂದು ಕಿಮೀ ರಸ್ತೆಗೆ 15 ಕೋಟಿ ರೂ. ಖರ್ಚು: ವೈಟ್ ಟಾಪಿಂಗ್ ರಸ್ತೆಗಳ ಬಗ್ಗೆ ತನಿಖೆಗೆ ಎಎಪಿ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದ ಹಲಸೂರು ಕೆರೆ ಬಳಿಯ ಕೆನ್ಸಿಂಗ್ಟನ್ ಜಂಕ್ಷನ್ ಸಮೀಪ ವೈಟ್ ಟಾಪಿಂಗ್ ರಸ್ತೆ ಕುಸಿದು ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ಈ ಗುಂಡಿಗೆ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪೂಜೆ ನೆರವೇರಿಸುವ ಮೂಲಕ ಮಹಾ ಗುಂಡಿಗೆ ಮಹಾಪೂಜೆ ಪ್ರತಿಭಟನೆ ನಡೆಸಿದರು.

ಬ್ರಾಂಡ್ ಬೆಂಗಳೂರಿಗೆ ಧಿಕ್ಕಾರ ಕೂಗಿದ ಪ್ರತಿಭಟನೆ ಕಾರರು, ವೈಟ್ ಟಾಪಿಂಗ್ ರಸ್ತೆ ಕುಸಿದಿದ್ದು, ಯಾವುದೇ ನಾಗರಿಕರನ್ನು ಬಲಿ ತೆಗೆದುಕೊಳ್ಳದೆ ಅನುಕಂಪ ತೋರಿರುವ ಮಹಾ ಗುಂಡಿಗೆ ಮಹಾಪೂಜೆ ಮಾಡುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಉಸ್ತುವಾರಿ ಡಿಕೆ ಶಿವಕುಮಾರ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಕೆಟ್ಟ ರಸ್ತೆಗಳನ್ನು ನಿರ್ಮಿಸಿ ಭ್ರಷ್ಟಾಚಾರ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ರಿಜ್ವಾನ್ ಅರ್ಷದ್ ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ಘೋಷಣೆ ಕೂಗಿದರು.

ಪೂಜೆ ಸಲ್ಲಿಸಿ, ಘೋಷಣೆ ಕೂಗಿದ ಬಳಿಕ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ವೈಟ್ ಟಾಪಿಂಗ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಇದು ರಾಜಕಾರಣಿಗಳಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದೆ. ಕೇವಲ ಒಂದು ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ 15 ಕೋಟಿ ರೂ. ಖರ್ಚು ಮಾಡಲಾಗಿದೆ. ಇಷ್ಟು ಹಣ ಖರ್ಚು ಮಾಡಿದರೂ, ರಸ್ತೆ ಕುಸಿದಿದೆ. ಸಾಮಾನ್ಯ ಟಾರ್ ರಸ್ತೆ ಹಾಕಿದ್ದಕ್ಕಿಂತ ಇದು ಕೆಟ್ಟದಾಗಿದೆ ಎಂದರು.

ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ವೈಟ್ ಟಾಪಿಂಗ್ ರಸ್ತೆಗಳ ಆಡಿಟ್ ಆಗಬೇಕು. ಆಗ ಮಾತ್ರ ಇದರಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಗೊತ್ತಾಗುತ್ತದೆ. ಈ ರಸ್ತೆಯನ್ನು ನಿರ್ಮಿಸಿ 9 ತಿಂಗಳಾಗಿದ್ದು, ಈಗಾಗಲೇ ಗುಂಡಿ ಬಿದ್ದಿದೆ ಎಂದರೆ ಎಷ್ಟು ಭ್ರಷ್ಟಾಚಾರ ಆಗಿದೆ ಎಂಬುದು ಗೊತ್ತಾಗುತ್ತದೆ ಎಂದರು.

ನಾವು ಈ ವಿಚಾರವನ್ನು ಇಲ್ಲಿಗೆ ಸುಮ್ಮನೆ ಬಿಡುವುದಿಲ್ಲ. ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ. ಕಳೆದ 5-10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವೈಟ್ ಟಾಪಿಂಗ್, ಸ್ಮಾರ್ಟ್ ಸಿಟಿಯಡಿ ಮಾಡಿರುವ ರಸ್ತೆಗಳ ಆಡಿಟ್ ಆಗಬೇಕು. ಲೋಕಾಯುಕ್ತರು ಸ್ವತಂತ್ರವಾಗಿ ತನಿಖೆ ನಡೆಸಿ, ಗುತ್ತಿಗೆದಾರರನ್ನು ಶಾಶ್ವತವಾಗಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿ ಕಮಿಷನರ್‌ರನ್ನು ಭೇಟಿ ಮಾಡುತ್ತೇವೆ. ಬೇರೆ ವೈಟ್ ಟಾಪಿಂಗ್ ಕಾಮಗಾರಿಗೆ ಅನುಮತಿ ನೀಡುವ ಮೊದಲು ಈಗಾಗಲೇ ಪೂರ್ಣಗೊಂಡಿರುವ ವೈಟ್ ಟಾಪಿಂಗ್ ರಸ್ತೆಗಳ ಗುಣಮಟ್ಟ ಪರೀಕ್ಷೆ ಮಾಡಿಸಲಿ. ಗುಂಡಿ ಬಿದ್ದ ರಸ್ತೆಯನ್ನು ನಿರ್ಮಿಸಿದ ಗುತ್ತಿಗೆದಾರರನ್ನು ಬ್ಯಾನ್ ಮಾಡಬೇಕು. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ಈ ರೀತಿ ಭ್ರಷ್ಟಾಚಾರ ನಡೆಯುತ್ತಿರುತ್ತದೆ ಎಂದು ಹೇಳಿದರು.

ವೈಟ್‌ ಟಾಪಿಂಗ್‌ ಮಾಡುವ ಮೊದಲು ಈ ರಸ್ತೆ ಚನ್ನಾಗಿತ್ತು. ದುಡ್ಡು ಮಾಡಲು ಇಲ್ಲಿ ವೈಟ್ ಟಾಪಿಂಗ್ ಮಾಡಲಾಗಿದ್ದು, 15 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರು.

ಗುಂಡಿ ಬೀಳುವುದರಲ್ಲಿ ನಮ್ಮ ಸಮಸ್ಯೆ ಇಲ್ಲ ಎಂದು ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಹೇಳುತ್ತಾರೆ. ರಾತ್ರೋ ರಾತ್ರಿ ಜಲ್ಲಿ ಹಾಕಿ ಮುಚ್ಚಲಾಗಿದೆ. ಆದರೆ, ಈ ಸಮಸ್ಯೆ ಉಂಟಾಗಲು ಕಾರಣವೇನು ಎಂದು ಪ್ರಶ್ನಿಸಿದರು. ಗುಣಮಟ್ಟ ಪರೀಕ್ಷೆ ನಡೆಸಿದ್ದರೆ ಇದು ಬಯಲಾಗುತ್ತಿತ್ತು. ಈಗ ಸೂಕ್ತವಾದ ತನಿಖೆ ನಡೆಸಲಿ. ರಾತ್ರಿ ಯಾರು ಓಡಾಡದಿರುವುದು ಅದೃಷ್ಟ. ಅಕಸ್ಮಾತ್ ಯಾರಾದರೂ ಬಿದ್ದಿದ್ದರೆ ಜೀವವೇ ಹೋಗುತ್ತಿತ್ತು ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಬಿಜೆಪಿ ಅಣ್ಣ ತಮ್ಮಂದಿರಂತೆ ಇದ್ದು, ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದಾರೆ. ಬಿಬಿಎಂಪಿ ಚುನಾವಣೆ ಮುಂದೂಡಲು ಕಾರಣವೇನು, ಬಿಜೆಪಿ, ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡುತ್ತಿವೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫರೀದುದ್ದೀನ್ ಶರೀಫ್ , ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ,ಮಹಿಳಾ ಮುಖಂಡೆ ಮರಿಯ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?