ಬೆಂಗಳೂರು: BMTC: QR ಕೋಡ್ ಸ್ಕ್ಯಾನ್ ನೀನೇ ಮಾಡಬೇಕು – ಕೆಲ ಪ್ರಯಾಣಿಕರಿಂದ ಕಂಡಕ್ಟರ್‌ಗಳಿಗೆ ಅವಾಜ್ ಎಂಬ ಶೀರ್ಷಿಕೆಯಡಿ ನಿನ್ನೆ (ಡಿ.18ರ ಸೋಮವಾರ) ವಿಜಯಪಥ ವರದಿ ಮಾಡಿ ಚಾಲನಾ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಆಗುತ್ತಿರುವ ಸಂಘರ್ಷದ ಬಗ್ಗೆ ವಿವರವಾದ ಚಿತ್ರಣವನ್ನು ಬಿಚ್ಚಿಟ್ಟಿತ್ತು.
ಈ ವರದಿಗೆ ಕಿರಣ್ ಎಂಬುವರು ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದು, ಬಿಎಂಟಿಸಿ ಹೊರಡಿಸಿರುವ FAQ ಒಮ್ಮೆ ನೋಡಿ. ಬಹುತೇಕ ಬಸ್ಸುಗಳಲ್ಲಿ QR ಕೋಡ್ ಮಾಸಿ ಹೋಗಿರುತ್ತದೆ. ಈ ವೇಳೆ ನಿರ್ವಾಹಕರು ಉದ್ಧಟತನ ಮೆರೆದು ಡ್ರೈವರ್ ಬಳಿ ಇರುವ QR ಕೋಡ್ ಸ್ಕ್ಯಾನ್ ಮಾಡೋಕೆ ಕಳಿಸುತ್ತಾರೆ.
ಈ ಬಗ್ಗೆ ನಾವು ಯಾರಿಗೆ ಹೇಳೋದು ಸಂಸ್ಥೆಯಲ್ಲಿ ಇರುವ ಅಧಿಕಾರಿಗಳು ಸರಿಯಾಗಿ ಈ ಬಗ್ಗೆ ಗಮನಕೊಡುತ್ತಿಲ್ಲ. ಬಸ್ಸುಗಳಲ್ಲಿ QR ಕೋಡ್ ಮಾಸಿ ಹೋಗಿದ್ದರೆ ಅದು ಹೇಗೆ ಸ್ಕ್ಯಾನ್ ಆಗುತ್ತದೆ. ಒಂದು ವೇಳೆ ಸ್ಕ್ಯಾನ್ ಆಗದಿದ್ದರೆ ಅಥವಾ ನಿಮ್ಮ ಇಂಟರ್ನೆಟ್ ಕಾರ್ಯನಿರ್ವಹಿಸದಿದ್ದರೆ, ನೀವು ಕಂಡಕ್ಟರ್‌ಗೆ ನಿಮ್ಮ ಟಿಕೆಟ್ ಸಂಖ್ಯೆ ಅಥವಾ ನೀವು ಟಿಕೆಟ್/ಪಾಸ್ ಖರೀದಿಸಿದ ನೋಂದಾಯಿತ ಫೋನ್ ನಂಬರ್ ನೀಡಿದರೆ ಅವರು ತನ್ನ ಆ್ಯಪ್/ಇಟಿಎಂ ಸಾಧನದಲ್ಲಿ ಅದನ್ನು ಪರಿಶೀಲಿಸಿ ಓಕೆ ಮಾಡುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆದರೆ, ಕೆಲ ನಿರ್ವಾಹಕರು ಕೂಡ ಈ ಬಗ್ಗೆ ಕಾಳಜಿವಹಿಸಬೇಕು. ಬಸ್‌ಗಳಲ್ಲಿ QR ಕೋಡ್ ಮಾಸಿ ಹೋಗಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದು ಸರಿ ಮಾಡಿಸಬೇಕು. ಅದನ್ನು ಬಿಟ್ಟು ಬಸ್‌ಗಳು ರಷ್ ಇರುವ ವೇಳೆ ಇಲ್ಲಿರುವ QR ಕೋಡ್ ಸ್ಕ್ಯಾನ್ ಆಗುತ್ತಿಲ್ಲ ಎಂದರೆ ಡ್ರೈವರ್ ಬಳಿ ಇರುವ QR ಕೋಡ್ ಸ್ಕ್ಯಾನ್ ಮಾಡೋಕೆ ಹೇಳಿದರೆ ನಾವು ಹೋಗಿ ಹೇಗೆ ಸ್ಕ್ಯಾನ್ ಮಾಡುವುದು ಎಂದು ಕಿರಣ್ ಪ್ರಶ್ನಿಸಿದ್ದಾರೆ.
ಇನ್ನು ಇದರ ಜತೆಗೆ ವಿಜಯಪಥ ವರದಿ ಮಾಡಿ ಸಮಸ್ಯೆಯನ್ನು ವಿವರವಾಗಿ ನೀಡುತ್ತಿರುವುದು ಸಮಾಧಾನಕರ ಸಂಘತಿ ಎಂದು ಹೇಳಿರುವ ಅವರು, ಕೆಲ ಪ್ರಯಾಣಿಕರು ಕೂಡ ಎಲ್ಲ ಸರಿ ಇದ್ದರೂ ಉದ್ಧಟತನದಿಂದ ವರ್ತಿಸುತ್ತಾರೆ ಎಂಬುದನ್ನು ನಾವು ಇಲ್ಲ ಎನ್ನಲಾಗುವುದಿಲ್ಲ.
ಈ ರೀತಿ ವರ್ತನೆ ತೋರುವ ಪ್ರಯಾಣಿಕರಿಗೆ ಅರಿವು ಮೂಡಿಸುವ ಸಲುವಾಗಿ QR ಕೋಡ್ ಪಕ್ಕದಲ್ಲೇ ಆನ್‌ಲೈನ್‌ನಲ್ಲಿ ಪಾಸ್ ಪಡೆದ ಪ್ರಯಾಣಿಕರು ಪಾಲಿಸಬೇಕಾದ ಸೂಚನೆಗಳನ್ನೊಳಗೊಂಡ ಭಿತ್ತಿಪತ್ರವನ್ನು ಹಾಕಿದರೆ ಅನುಕೂಲವಾಗುತ್ತಿದೆ ಎಂದು ಸಲಹೆ ನೀಡಿದ್ದಾರೆ.
ಇಲ್ಲಿ ಕೆಲವೊಮ್ಮೆ ಕೆಲ ನಿರ್ವಾಹಕರು ಕೂಡ ಪ್ರಯಾಣಿಕರೊಂದಿಗೆ ಮತ್ತು ಕೆಲ ಪ್ರಯಾಣಿಕರು ಕೂಡ ನಿರ್ವಾಹಕರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಗೆ ಇಳಿಯುತ್ತಾರೆ. ಹೀಗಾಗಿ ಇಂಥ ಘರ್ಷಣೆಗಳಿಗೆ ಆಸ್ಪದ ಕೊಡದಂತೆ ನಿಗಮದ ಆಡಳಿತ ಮಂಡಳಿ ಕೂಡ ನಿಗಾವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಬಿಎಂಟಿಸಿಯ FAQ ಏನು ಹೇಳುತ್ತದೆ: ಬಸ್ಸಿನೊಳಗೆ ನನ್ನ ಪಾಸ್ ಅನ್ನು ನಾನು ಹೇಗೆ ಮೌಲ್ಯೀಕರಿಸಬಹುದು? ನಿಮ್ಮ ಟಿಕೆಟ್/ಪಾಸ್ ಅನ್ನು ಮೌಲ್ಯೀಕರಿಸಲು ಮೂರು ಮಾರ್ಗಗಳಿವೆ. ಒಮ್ಮೆ ನೀವು Tummoc ಅಪ್ಲಿಕೇಶನ್‌ನಲ್ಲಿ ನಿಮ್ಮ ಟಿಕೆಟ್/ಪಾಸ್ ಅನ್ನು ಓಪನ್ ಮಾಡಿದ ಬಳಿಕ…
1) Tummoc ಅಪ್ಲಿಕೇಶನ್‌ನಲ್ಲಿ ಸ್ಕ್ಯಾನ್ QR ಬಟನ್ ಟ್ಯಾಪ್ ಮಾಡಿ ಮತ್ತು ಕಂಡಕ್ಟರ್ ಪ್ರಸ್ತುತಪಡಿಸುವ ಅಂದರೆ ಬಸ್‌ನಲ್ಲಿ ಅಳವಡಿಸಿರುವ QR ಕೋಡ್ ಸ್ಕ್ಯಾನ್ ಮಾಡಬೇಕು.
2) ETM ಸಾಧನ/ ಮೊಬೈಲ್ ಅಪ್ಲಿಕೇಶನ್ ಬಳಸಿ QR ಕೋಡ್ ಸ್ಕ್ಯಾನರ್‌ನೊಂದಿಗೆ ಸ್ಕ್ಯಾನ್ ಮಾಡಲು ಕಂಡಕ್ಟರ್‌ಗೆ ನಿಮ್ಮ QR ಕೋಡ್ ತೋರಿಸಿ. 3) ಸಿಂಧುತ್ವ ಮತ್ತು ಇತರ ಯಾವುದೇ ಪ್ರಮುಖ ವಿವರಗಳನ್ನು ಪರಿಶೀಲಿಸಲು ಕಂಡಕ್ಟರ್ ಟಿಕೆಟ್/ಪಾಸ್ ವಿವರಗಳನ್ನು ಹಸ್ತಚಾಲಿತವಾಗಿ ಪರಿಶೀಲಿಸಲು ಅವರಿಗೆ ಸಹಕರಿಸಬೇಕು.
ಕಂಡಕ್ಟರ್ ಮತ್ತು ತನಿಖಾಧಿಕಾರಿಗಳಿಗೂ ತೋರಿಸುವುದು ನಿಮ್ಮ ಕರ್ತವ್ಯ: ಹೌದು ಕಂಡಕ್ಟರ್ ಮತ್ತು ತನಿಖಾಧಿಕಾರಿಗಳಿಗೆ ನಾನು ಹೇಗೆ ಪಾಸ್ ತೋರಿಸಬೇಕು ಎಂದು ನೀವು ಕೇಳಿದರೆ, ನೀವು ಮಾಡಬೇಕಿರುವುದು ಇಷ್ಟೆ…
ನಿಮ್ಮ ಟಿಕೆಟ್ ಅನ್ನು ಪರಿಶೀಲಿಸಲು ಕಂಡಕ್ಟರ್/ ತನಿಖಾಧಿಕಾರಿಗಳಿಗೆ ನೀವು Tummoc ಅಪ್ಲಿಕೇಶನ್‌ನಲ್ಲಿ ಟಿಕೆಟ್/ಪಾಸ್ ತೋರಿಸಬೇಕು. ಹೆಚ್ಚುವರಿಯಾಗಿ, ಪಾಸ್‌ಗಳ ಸಂದರ್ಭದಲ್ಲಿ, ನಿಮ್ಮ ಪಾಸ್ ಬುಕ್ ಮಾಡುವಾಗ ನೀವು ಬಳಸಿದ ID ಯ ID ಸಂಖ್ಯೆಯನ್ನು ಕೇಳಬಹುದು ಅದನ್ನು ತೋರಿಸುವುದು ನಿಮ್ಮ ಕೆಲವಾಗಿದೆ.
ಇನ್ನು ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸದಿದ್ದರೆ, ನೀವು ಕಂಡಕ್ಟರ್‌ಗೆ ನಿಮ್ಮ ಟಿಕೆಟ್ ಸಂಖ್ಯೆ ಅಥವಾ ನೀವು ಟಿಕೆಟ್/ಪಾಸ್ ಖರೀದಿಸಿದ ನೋಂದಾಯಿತ ಫೋನ್ ನಂಬರ್ ನೀಡಬಹುದು. ಈ ವೇಳೆ ಕಂಡಕ್ಟರ್‌ಗಳು ತನ್ನ ಆ್ಯಪ್/ಇಟಿಎಂ ಸಾಧನದಲ್ಲಿ ಅದನ್ನು ಪರಿಶೀಲಿಸುತ್ತಾರೆ.
ಆ ಬಳಿಕ ನೀವು ಆನ್‌ಲೈನ್‌ನಲ್ಲಿ ಪಾಸ್ ಪಡೆದಿರುವುದರಬಗ್ಗೆ ನಿರ್ವಾಹಕರು ಖಚಿತಪಡಿಸಿಕೊಳ್ಳುತ್ತಾರೆ. ಇದನ್ನು ಪ್ರತಿಯೊಬ್ಬ ಆನ್‌ಲೈನ್ ಪಾಸ್ ಪಡೆದ ಪ್ರಯಾಣಿಕರು ತಮ್ಮ ಆದ್ಯ ಕರ್ತವ್ಯವೆಂದು ಪಾಲಿಸಬೇಕು. ಇದರಲ್ಲಿ ಪ್ರಯಾಣಿಕರಾಗಲಿ ಇಲ್ಲ ನಿರ್ವಾಹಕರಾಗಲಿ ಉದ್ಧಟತನ ತೋರಿಸುವುದು ಸರಿಯಲ್ಲ ಎಂದು ಕಿರಣ್ ಸಲಹೆ ನೀಡಿದ್ದಾರೆ.