ಮಡಿಕೇರಿ: ಬ್ಯಾಂಕ್ಗಳಿಗೆ ಪಿಂಚಣಿದಾರರು ಹಾಗೂ ಇತರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದ್ದು, ಯಾವುದೇ ರೀತಿಯ ಜನದಟ್ಟಣೆ ಉಂಟಾಗದಂತೆ ಅಗತ್ಯ ಕ್ರಮವಹಿಸುವಂತೆ ವಿವಿಧ ಬ್ಯಾಂಕ್ಗಳ ಶಾಖೆ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.
ಬ್ಯಾಂಕ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ನಿರ್ದೆಶನ ನೀಡಿದರು.
ಮಹಿಳೆಯರ ಹೆಸರಿನಲ್ಲಿರುವ ಜನ್ಧನ್ ಖಾತೆಗೆ ಸಂಬಂಧಿಸಿದಂತೆ ಏಪ್ರಿಲ್ ಮೊದಲ ವಾರದಲ್ಲಿ ಹಣ ಜಮೆಯಾಗಲಿದ್ದು, ಏಪ್ರಿಲ್ 9 ರ ನಂತರ ಟೋಕನ್ ನೀಡಿ ಏಪ್ರಿಲ್ 13, 15 ಮತ್ತು 17 ರಂದು ಗ್ರಾಹಕರಿಗೆ ಬ್ಯಾಂಕ್ ಸೇವೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಗ್ರಾಮೀಣ ಪ್ರದೇಶದ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿಗ್ ಮಿತ್ರರು ಹೋಂ ಕ್ವಾರೆಂಟೈನ್ನಲ್ಲಿ ಇರುವ ಮನೆ ಹೊರತುಪಡಿಸಿ ಉಳಿದ ಮನೆಗಳಿಗೆ ಭೇಟಿ ನೀಡಿ ಬ್ಯಾಂಕ್ ಸೇವೆ ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಟಿಎಂಗಳಲ್ಲಿ ಹಣ ಇರಬೇಕು. ಎಟಿಎಂಗಳಲ್ಲಿ ಹಣ ಇಲ್ಲ ಎಂಬ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಸರ್ಕಾರ ಕೋವಿಡ್-19 ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಮಾಡಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರಿಗೆ ಹಲವು ವಿನಾಯ್ತಿ ಪ್ರಕಟಿಸಿದ್ದು ಅವುಗಳನ್ನು ಪಾಲಿಸಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಮಾತನಾಡಿ, ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ಗಳು ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ದಿನವು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿವೆ ಎಂದರು.
ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳ ವಲಯ, ಕ್ಷೇತ್ರೀಯ ಕಾರ್ಯಾಲಯಗಳಿಗೆ ನೀಡಿರುವ ನಿರ್ದೇಶನದಂತೆ ಬ್ಯಾಂಕುಗಳ ಕಾರ್ಯ ನಿರ್ವಹಿಸಲಿವೆ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್ನ ನಗರ ಮುಖ್ಯ ಶಾಖೆಯ ವ್ಯವಸ್ಥಾಪಕರಾದ ದಿನೇಶ್ ಪೈ, ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಪ್ರಕಾಶ್ ಅವರು ಹಲವು ಮಾಹಿತಿ ನೀಡಿದರು. ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಇದ್ದರು.