ವಿಜಯಪುರ: ಕಲ್ಯಾಣದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ಈ ಹಿಂದೆ ಇದ್ದ ಅಧಿಕಾರಿಗಳು ನನ್ನಗೆ ಬರಬೇಕಾದ ಪಿಂಚಣಿಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದ್ದಾರೆ ಎಂದು ನಿಗಮದ ನಿವೃತ್ತ ನೌಕರ ಬಿ.ಎನ್.ಹುಂಡೇಕರ್ ಆರೋಪಿಸಿದ್ದಾರೆ.
ನನಗೆ ಬರಬೇಕಿರುವ 2800 ರೂ. ಪಿಂಚಣಿಯ ಬದಲಿಗೆ 1039 ರೂಪಾಯಿ ಕೊಡುತ್ತಿದ್ದಾರೆ. ಈ ಮೂಲಕ ನನಗೆ ಅನ್ಯಾಯ ಮಾಡುವ ಜತೆಗೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದೆ ಗಾಳಿಗೆ ತೂರಿದ್ದಾರೆ ಎಂದು ದೂರಿದ್ದಾರೆ.
ಇನ್ನು 2015ರಲ್ಲಿ ಇದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಕಾನೂನು ಅಧಿಕಾರಿಗಳು, ಲೆಕ್ಕಪತ್ರ ಅಧಿಕಾರಿಗಳು ನನಗೆ ತೊಂದರೆ ಮಾಡುವ ಉದ್ದೇಶದಿಂದಲೇ ನ್ಯಾಯಾಲಯ ತೀರ್ಪುನ್ನು ಕೂಡ ಪಾಲನೆ ಮಾಡದೆ ಈ ಅನ್ಯಾಯ ಎಸಗುತ್ತಿದ್ದಾರೆ.
ನನ್ನ ಜತೆ ನಿವೃತ್ತರಾದರು 2800 ರೂಪಾಯಿಗಳಿಗೂ ಹೆಚ್ಚು ಪಿಂಚಣಿ ಪಡೆಯುತ್ತಿದ್ದಾರೆ. ಆದರೆ, ನನಗೆ ಮಾತ್ರ ಕಡಿತಗೊಳಿಸಿ 1039 ರೂ.ಗಳು ಬರುವಂತೆ ಮಾಡಿದ್ದಾರೆ ಇದು ಅನ್ಯಾಯ ಈ ಬಗ್ಗೆ ಹಲವಾರು ಬಾರಿ ಎಂಡಿಗಳಿಗೂ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
2015ರಿಂದಲೂ ಈ ಬಗ್ಗೆ ಡಿಸಿ, ಕಾನೂನು ಅಧಿಕಾರಿಗಳು, ಲೆಕ್ಕಪತ್ರ ಅಧಿಕಾರಿಗಳು ಸೇರಿದಂತೆ ಬಹುತೇಕ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ನಾನು ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಪಟ್ಟ ಮೇಲಧಿಕಾರಿಗಳು ಈಗಲಾದರೂ ನನಗೆ ನ್ಯಾಯಯುತವಾಗಿ ಬರಬೇಖಿರುವುದನ್ನು ಕೊಡಿಸಬೇಕು ಎಂದು ಮನವಿ ಮಾಡುತ್ತೇನೆ.
ಇಲಾಖೆಯ ಲೆಕ್ಕಪತ್ರ ಅಧಿಕಾರಿಗಳು ತಪ್ಪಾಗಿರುವುದನ್ನು ಸರಿ ಮಾಡುವ ಬದಲಿಗೆ ಅದನ್ನು ಪಿಂಚಣಿ ಇಲಾಖೆಯ ಮೇಲೆ ಹಾಕುತ್ತಾರೆ ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿಭಾಗದ ಭದ್ರತಾ ಹಾಗೂ ಜಾಗೃತಾ ಇಲಾಖೆಯ ಅಧಿಕಾರಿಗಳ ಮೂಲಕ ತನಿಖೆ ಮಾಡಿಸಿ ನನಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡಿಸಬೇಕು ಎಂದು ವಿನಂತಿ ಮಾಡಿದ್ದಾರೆ.
ಸಾರಿಗೆ ನಿಗಮಗಳಲ್ಲಿ ಕೆಲ ಮೇಲಧಿಕಾರಿಗಳು ಕೆಳ ಹಂತದ ನೌಕರರಿಗೆ ಈರೀತಿ ಮಾನಸಿಕವಾಗಿ ಹಿಂಸೆ ನೀಡುವುದರ ಜತೆಗೆ ಅವರನ್ನು ಆರ್ಥಿಕವಾಗಿ ಕುಗ್ಗುವಂತೆ ಮಾಡುವ ಕೆಲಸವನ್ನು ಈ ಹಿಂದಿನಿಂದಲೂ ನಿರಂತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ಈ ಬಗ್ಗೆ ನೌಕರರು ಎಚ್ಚೆತ್ತುಕೊಂಡು ನ್ಯಾಯಾಲಯದ ಮೆಟ್ಟಿಲೇರುತ್ತಿರುವುದರಿಂದ ಇಂಥ ಪ್ರಕರಣಗಳು ಕಡಿಮೆಯಾಗಿವೆ.
ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಈ ರೀತಿ ಕಿರುಕುಳವನ್ನು ನಿವೃತ್ತ ನೌಕರರಿಗೆ ಕೊಡುತ್ತಿರುವುದು ಬಹಳ ನೋವಿನ ಸಂಘತಿಯಾಗಿದೆ. ಹೀಗಾಗಿ ನಿಗಮದ ಎಂಡಿ ಅವರು ಈ ಬಗ್ಗೆ ವಿಶೇಷ ಕಾಳಜಿವಹಿಸಿ ನಿವೃತ್ತ ನೌಕರ ಬಿ.ಎನ್.ಹುಂಡೇಕರ್ ಅವರಿಗೆ ನ್ಯಾಯದೊರಕಿಸಿಕೊಡುವರೇ ಎಂಬುದನ್ನು ಕಾದು ನೋಡಬೇಕಿದೆ.