ಧಾರವಾಡ: ಕೋವಿಡ್-19 ಸೋಂಕು ತಡೆಯಲು ಸರ್ಕಾರಿ ಆಸ್ಪತ್ರೆಗಳು ಶ್ರಮಿಸುತ್ತಿವೆ. ಆದರೆ ಉಳಿದ ಸಣ್ಣಪುಟ್ಟ ಸಾಮಾನ್ಯ ಕಾಯಿಲೆಗಳು ಹಾಗೂ ತುರ್ತು ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಗಳು ಒದಗಿಸಬೇಕು. ಈ ಕುರಿತು ಚರ್ಚಿಸಲು ನಾಳೆ (ಏಪ್ರೀಲ್ 4) ಅವಳಿನಗರದ ಖಾಸಗಿ ವೈದ್ಯರ ಸಭೆ ನಡೆಸಲಾಗುವುದು ಎಂದು ಬೃಹತ್ ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಿಮ್ಸ್ ವೈದ್ಯರ ಸಭೆ ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನಧನ್ ಖಾತೆಗಳಿಗೆ ತಲಾ 500 ರೂ.ಗಳನ್ನು ಪಾವತಿಸಲಾಗುತ್ತಿದೆ. ಫಲಾನುಭವಿಗಳು ಶಿಸ್ತಿನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಹಣ ಪಡೆಯಬೇಕು ಎಂದರು.
21 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೀಡಾಗುವ ಜನರಿಗೆ ನೆರವು ನೀಡಲು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರುತ್ತಿವೆ. ಅವರು ನೀಡುವ ಆಹಾರ ಧಾನ್ಯ, ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳನ್ನು ಸ್ವೀಕರಿಸಿ, ಅವರು ಹೇಳಿದ ಸ್ಥಳಗಳಿಗೆ ವಿತರಿಸಲು ಅಗತ್ಯ ಏರ್ಪಾಡು ಮಾಡಬೇಕು. ಬಡತನ ರೇಖೆಗಿಂತ ಕೆಳಗಿರುವ ಅರ್ಹ ಪಡಿತರ ಚೀಟಿದಾರರರಿಗೆ ಯಾವುದೇ ತೊಂದರೆಯಾಗದಂತೆ ಆಹಾರ ಧಾನ್ಯ ವಿತರಿಸಬೇಕು. ಒಟಿಪಿ ಆಧಾರಿತ ಸೇವೆ ಸಾಧ್ಯವಾಗದಿದ್ದರೆ ಸರಳ ರೀತಿಯಲ್ಲಿ ಸಾಂದರ್ಭಿಕವಾಗಿ ಪರಿಹಾರ ಕಂಡುಕೊಂಡು ಧಾನ್ಯಗಳನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.
ಧಾರವಾಡ ಜಿಲ್ಲೆ ಅಷ್ಟೇ ಅಲ್ಲಾ ಇಡೀ ದೇಶ, ಜಗತ್ತು ಕೊರೊನಾ ಆತಂಕ ಎದುರಿಸುತ್ತಿದೆ. ಸರ್ಕಾರಿ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಡಳಿತ ವರ್ಗ ಅವಿರತವಾಗಿ ಇದರ ವಿರುದ್ಧ ಹೋರಾಡುತ್ತಿದೆ. ಅಧಿಕಾರಿಗಳ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ರಾಜ್ಯ ಸರ್ಕಾರದ ಸೂಚನೆಯಂತೆ ಪ್ರತಿನಿತ್ಯ 25 ಸಾವಿರ ಲೀಟರ್ ಹಾಲು ಉಚಿತವಾಗಿ ಪೂರೈಸಲು ಕೊಳಚೆ ಪ್ರದೇಶಗಳ, ನಿರಾಶ್ರಿತರಿಗೆ, ವಲಸೆ ಕಾರ್ಮಿಕರನ್ನು ಗುರುತಿಸಲಾಗಿದೆ. ಸರ್ಕಾರದ ವಿವಿಧ ಹಾಸ್ಟೇಲ್‍ಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿರುವ ಜನರಿಗೆ ಧಾರ್ಮಿಕ ಮುಖಂಡರಿಂದ ಹಾಗೂ ಮನೋವೈದ್ಯರಿಂದ ಆಪ್ತ ಸಮಾಲೋಚನೆ ಏರ್ಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಮಾತನಾಡಿ, ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿರುವವರಲ್ಲಿ ರೋಗ ಲಕ್ಷಣ ಇಲ್ಲದಿದ್ದರೂ ಸಹ ತಮ್ಮ ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹಿಸಲು ಕಿಮ್ಸ್‍ಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರ ಒತ್ತಡ ಕಡಿಮೆ ಮಾಡಲು ಎಸ್‍ಡಿಎಂ ಆಸ್ಪತ್ರೆಯಲ್ಲಿಯೂ ಫಿವರ್ ಕ್ಲಿನಿಕ್ ಹಾಗೂ ಗಂಟಲು ದ್ರವ ಸಂಗ್ರಹ ಕಾರ್ಯ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.