ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾದ ಬೆನ್ನೆಲ್ಲೇ ವಿಶೇಷ ತನಿಖಾ ತಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದಿದೆ.
ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನೆಯಲ್ಲಿ ಅವರನ್ನು ವಶಕ್ಕೆ ಪಡೆದು ಕರೆದುಕೊಯ್ದರು.
ಸಿಐಡಿ ಕಚೇರಿ ಆವರಣದಲ್ಲಿರುವ ತಮ್ಮಕಚೇರಿಗೆ ರೇವಣ್ಣ ಅವರನ್ನು ಕರೆದುಕೊಂಡು ಹೋಗಿದ್ದು, ಬಳಿಕ ಬೋರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದು, ಬಳಿಕ ನ್ಯಾಯಾಧೀಶರ ಮುಂದೆ ಯಾವುದೇ ಸಂದರ್ಭದಲ್ಲಿ ಹಾಜರು ಪಡಿಸಬಹುದು.
ಮಹಿಳೆಯೊಬ್ಬರ ಅಪಹರಣ ಮಾಡಿದ ಆರೋಪದ ಪ್ರಕರಣದಲ್ಲಿ ಅಧಿಕಾರಿಗಳು ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಸಂತ್ರಸ್ತ ಮಹಿಳೆ ಆರೋಪಿಸಿ ನೀಡಿರುವ ದೂರಿನ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿದೆ.
ಅಲ್ಲದೆ, ಅವರ ಪುತ್ರ ಪ್ರಜ್ವಲ್ ಅವರದೆನ್ನಲಾದ ಲೈಂಗಿಕ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಈಗಾಗಲೇ ನೋಟಿಸ್ ನೀಡಿದ್ದು, ರೇವಣ್ಣ ಅವರನ್ನು ಮೊದಲ ಆರೋಪಿ ಹಾಗೂ ಪ್ರಜ್ವಲ್ ಅವರನ್ನು ಎರಡನೇ ಆರೋಪಿ ಮಾಡಲಾಗಿದೆ.
ಎಸ್ಐಟಿ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ಮೇಲೆ ನೋಟಿಸ್ ನೀಡಿದ್ದಲ್ಲದೆ, ಲುಕ್ ಔಟ್ ನೋಟಿಸ್ ನೀಡಲಾಗಿತ್ತು. ನಿಗದಿತ ಗಡುವಿನೊಳಗೆ ಇಬ್ಬರೂ ಹಾಜರಾಗದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್ಐಟಿ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಮೇಲೆ ಆರೋಪ ಬಂದ ಕೂಡಲೇ ಸರ್ಕಾರ ಎಸ್ಐಟಿ ತನಿಖಗೆ ವಹಿಸಿತ್ತು. ಈ ವಿಚಾರವು ಕಳೆದೊಂದು ವಾರದಿಂದಲೂ ಭಾರೀ ಸದ್ದು ಮಾಡುತ್ತಿದೆ. ಮುಂದೆ ಯಾವ ಯಾವ ತಿರುವು ಪಡೆದುಕೊಳಳುವುದು ನೋಡಬೇಕಿದೆ.