ಬೆಂಗಳೂರು: ಮಳೆ ಬೀಳುತ್ತಿದ್ದ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಟೆಕ್ಕಿಯ ಮೇಲೆ ಮರದ ಕೊಂಬೆ ಬಿದ್ದು ಬೆನ್ನು ಮೂಳೆ ಮುರಿದಿರುವ ಘಟನೆ ರಾಜ್ಯ ರಾಜಧಾನಿಯ ಸಿ.ವಿ.ರಾಮನ್ ನಗರದ ನಾಗವಾರಪಾಳ್ಯ 2ನೇ ಕ್ರಾಸ್ನಲ್ಲಿ ನಡೆದಿದೆ.
ಐಟಿ ಕಂಪನಿ ಉದ್ಯೋಗಿ ರವಿಕುಮಾರ್ (26) ಬೆನ್ನು ಮೂಳೆ ಮುರಿತಕ್ಕೊಳಗಾದ ಗಾಯಾಳು. ಮಳೆ ಬೀಳುತ್ತಿದ್ದಾಗ ಟೆಕ್ಕಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಮಯಕ್ಕೆ ಮರದ ಕೊಂಬೆವೊಂದು ಮುರಿದು ಟೆಕ್ಕಿ ಮೇಲೆ ಬಿದ್ದಿದೆ. ಪರಿಣಾಮ ಬೆನ್ನು ಮೂಳೆ ಮುರಿದು ತೀವ್ರ ಗಾಯಗೊಂಡಿದ್ದಾನೆ.
ಸದ್ಯ ಗಾಯಾಳುವಿಗೆ ನಗರದ ಎಚ್ಎಎಲ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮರ ಜೋರಾಗಿ ಬಿದ್ದಿದ್ದರಿಂದ ಟೆಕ್ಕಿಯ ಸ್ಪೈನ್ ಕಾರ್ಡ್ ಮುರಿದು ಹೋಗಿದೆ. ಬಿಬಿಎಂಪಿ ಉಸ್ತುವಾರಿಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಗೆ ಗೋಡೆ ಕುಸಿದು ಮಗು ಸೇರಿ ಏಳು ಮಂದಿ ಸಾವು: ಇನ್ನು ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡ ಗೋಡೆ ಕುಸಿದು ದುರಂತ ಸಂಭವಿಸಿದೆ. ಇಂದು ಬೆಳಗ್ಗೆ ನಾಲ್ಕು ವರ್ಷದ ಮಗು ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣದ ಬಚುಪಳ್ಳಿಯಲ್ಲಿ ಮಳೆಯಿಂದಾಗಿ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಚುಪಳ್ಳಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಮೃತರು ಒಡಿಶಾ ಹಾಗೂ ಛತ್ತೀಸ್ಗಢ ಮೂಲದ ವಲಸೆ ಕಾರ್ಮಿಕರು. ಬಿಲ್ಡಿಂಗ್ ನಿರ್ಮಾಣ ಸಂಬಂಧ ತೆಲಂಗಾಣಕ್ಕೆ ಬಂದಿದ್ದರು. ಮೃತರ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತೆಲಂಗಾಣ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹೈದರಾಬಾದ್ನಲ್ಲಿ ಮಳೆಯಿಂದ ನಗರ ತತ್ತರಿಸಿ ಹೋಗಿದೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಡಿಆರ್ಎಫ್ ಘಟಕ ರಕ್ಷಣೆಗೆ ದೌಡಾಯಿಸಿದೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.