ಬೆಂಗಳೂರು: ವೇತನ ಸರಿಯಾಗಿ ಕೊಡುತ್ತಿಲ್ಲ, ವಸತಿ ಸೌಲಭ್ಯ ಕಲ್ಪಿಸಿಲ್ಲ ಮತ್ತು ವಿವಿಧ ಹಂತಗಳಲ್ಲಿ ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಇಂದು ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ತೆಗೆದುಕೊಳ್ಳಲಾಗಿದೆ. ಉದ್ಯೋಗ ನೀಡುವಾಗ ಪ್ರತಿ ತಿಂಗಳು 26,000 ರೂ. ವೇತನ ನೀಡುವುದಾಗಿ ಕಂಪನಿ ಹೇಳಿತ್ತು. ಆದರೆ ಕೇವಲ 18,000 ರೂ. ಸಂಬಳ ನೀಡುತ್ತಿದೆ. ಆರಂಭದಲ್ಲಿ ಪಿಎಫ್‌ಗೆ ಹಣ ಕಡಿತ ಮಾಡಲಾಗುತ್ತದೆ ಎಂದು ಹೇಳಿತ್ತು. ಅದೇರೀತಿ ಕಡಿತ ಮಾಡಲಾಗುತ್ತಿದೆ ಆದರೆ ಪಿಎಫ್‌ಗೆ ನಮ್ಮ ಹಣವನ್ನು ಹಾಕುತ್ತಿಲ್ಲ.
ಮೊದಲ ಎರಡು ತಿಂಗಳು 2,000 ರೂ. ಕಡಿತ ಮಾಡಿದ್ದರೆ ಈಗ ಈ ತಿಂಗಳ ಸಂಬಳದಲ್ಲಿ 5,000 ರೂ. ಕಡಿತ ಮಾಡಲಾಗಿದೆ. ಈ ತಿಂಗಳು ಕೆಲವರಿಗೆ ಮಾತ್ರ ಸಂಬಳ ನೀಡಿದ್ದರೆ ಉಳಿದ ನೌಕರರಿಗೆ ಸಂಬಳವೇ ಆಗಿಲ್ಲ. ಆರಂಭದಲ್ಲಿ ಟಾಟಾ ಕಂಪನಿಯಲ್ಲಿ ಚಾಲಕರಾಗಿ ನೇಮಕ ಮಾಡಲಾಗುವುದು ಎಂದು ಹೇಳಿತ್ತು. ಆದರೆ ಈಗ ಆರ್ಯ ಹೆಸರಿನ ಕಂಪನಿಯಲ್ಲಿ ಕೆಲಸ ನೀಡಲಾಗಿದೆ. ವಸತಿ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ನಮಗೆ ವಸತಿ ನೀಡಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ.
ಬಿಎಂಟಿಸಿ ವ್ಯಾಪ್ತಿಗೆ ಬರಲ್ಲ: ಡಿಪೋ- 3 ರಲ್ಲಿ 106 ಎಲೆಕ್ಟ್ರಿಕ್ ಬಸ್ಸುಗಳಿವೆ. ಮೂರು ಶಿಫ್ಟ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರು ಕೆಲಸ ಮಾಡುತ್ತಿದ್ದಾರೆ. ಈ ಎಲೆಕ್ಟ್ರಿಕ್ ಬಸ್ ಚಾಲಕರು ಬಿಎಂಟಿಸಿ ಸಂಸ್ಥೆಯ ಅಧೀನಕ್ಕೆ ಒಳಪಡುವುದಿಲ್ಲ. ಎಲೆಕ್ಟ್ರಿಕ್ ಬಸ್ ನೋಡಿಕೊಳ್ಳುವ ಕಂಪನಿಯೇ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಈ ಕಾರಣಕ್ಕೆ ಖಾಸಗಿ ಕಂಪನಿಯ ಮಾನಂದಂಡಕ್ಕೆ ಅನುಗುಣವಾಗಿ ಸಂಬಳ ನಿಗದಿ ಮಾಡಿದೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.
ಇನ್ನು ನಮಗೆ ವೇತನವಾಗಿಲ್ಲ ಎಂದು ಕೇಳಿದರೆ ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲ ಬಿಟ್ಟುಹೋಗಿ ಎಂದು ನಮಗೆ ಬೆದರಿಕೆಹಾಕುತ್ತಾರೆ. ಅಲ್ಲದೆ ಒಂದು ಮಿರರ್ ಒಡೆದುಹೋದರೆ ನಮ್ಮ ವೇತನದಲ್ಲೇ ಕಡಿತಮಾಡಿಕೊಳ್ಳುತ್ತಾರೆ. ವಸತಿ ಕಲ್ಪಿಸುತ್ತೇವೆ ಎಂದು ಹೇಳಿದ್ದರು, ಈಗ ನಾವು ಎಲ್ಲೆಲ್ಲೋ ಮಲಗಿಕೊಂಡು ಬರುವಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಅಲ್ಲದೆ ನಮಗೆ ಸರಿಯಾದ ನೀರು ಕೂಡ ಸಿಗುವುದಲ್ಲ. ಸ್ಥಾನ ಮಾಡುವುದಕ್ಕೆ ಕುಡಿಯುವುದಕ್ಕೆ ಸರಿಯಾದ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ನಮ್ಮನ್ನು ನೇಮಕ ಮಾಡಿಕೊಳ್ಳುವಾಗ ಹೇಳಿದ ಯಾವುದು ಪಾಲನೆಯಾಗುತ್ತಿಲ್ಲ. ಚಾಲಕರು ಎಂದರೆ ಅಷ್ಟು ಅಸಡ್ಡೆನಾ ಎಂದು ಕಿಡಿಕಾರಿದರು.
ಇನ್ನು ನೌಕರರು ಮಂಗಳವಾರ ಬೆಳಗ್ಗೆಯಿಂದ ಬಸ್‌ಗಳನ್ನು ಡಿಪೋನಿಂದ ಹೊರಗಡೆ ತೆಗೆಯದೆ ಪ್ರತಿಭಟನೆ ನಡೆಸುತ್ತಿದ್ದರು. ಈ ನಡುವೆ ಮಧ್ಯಾಹ್ನದ ವೇಳಗೆ ಸ್ಥಳಕ್ಕೆ ಬಂದ ಬಿಎಂಟಿಸಿ ಅಧಿಕಾರಿಗಳು ಸಂಧಾನ ಮಾಡಿದ ಬಳಿಕ ಚಾಲಕರು ಪ್ರತಿಭಟನೆ ಕೈಬಿಟ್ಟರು.