ಬೆಂಗಳೂರು: ಕರ್ನಾಟಕರ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ನಿರ್ವಾಹಕರೊಬ್ಬರು ಚಿತ್ರದುರ್ಗ – ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಟಿಕೆಟ್ ದರ 185 ರೂ. ಜತೆಗೆ 15 ರೂ.ಗಳನ್ನು ಹೆಚ್ಚುವರಿಯಾಗಿ ಪಡೆದ ಆರೋಪಕ್ಕೆ ಗುರಿಯಾಗಿದ್ದಾರೆ.
ಈ ಬಗ್ಗೆ @KSRTC_Journeys ಎಕ್ಸ್‌ನಲ್ಲಿ ಹೆಚ್ಚುವರಿ ಹಣಕೊಟ್ಟ ಪ್ರಯಾಣಿಕ ಜಶ್ಬಂತ್ ಜೆ.ಬಿ. ಎಂಬುವರು ಭಾನುವಾರ ದೂರು ನೀಡಿದ್ದು, ಅವರು ಕೊಟ್ಟಿರುವ ದೂರಿನ ಆಧಾರದ ಮೇಲೆ ಪರಿಶೀಲನೆ ಮಾಡಿ ನಿರ್ವಾಹಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣವೇನು?: ಭಾನುವಾರ ಸಂಜೆ 5.20ರ ಸುಮಾರಿಗೆ ಬೆಂಗಳೂರಿನಿಂದ ಹಿರಿಯೂರಿಗೆ ಹೋಗಲು ಜಶ್ಬಂತ್ ಎಂಬುವರು ಬಸ್ ಹತ್ತಿ ಟಿಕೆಟ್ ಪಡೆದಿದ್ದಾರೆ. ಈ ವೇಳೆ ಅವರ ಜತೆ ಎರಡು ಬ್ಯಾಗ್‌ಗಳು ಇದ್ದವು. ಆ ಬ್ಯಾಗ್‌ಗಳಿಗೆ ಲಗೇಜ್ ಟಿಕೆಟ್ ಕೊಟ್ಟಿಲ್ಲ. ಆದರೆ ಆತ ಪ್ರಯಾಣಿಸುತ್ತಿರುವುದಕ್ಕೆ 185 ರೂಪಾಯಿ ಟಿಕೆಟ್ ಕೊಟ್ಟಿದ್ದಾನೆ ನಿರ್ವಾಹಕ.
ಈ ವೇಳೆ ಜಶ್ಬಂತ್ 200 ರೂ.ಗಳನ್ನು ಕೊಟಿದ್ದು ಅಷ್ಟು ಹಣವನ್ನು ನಿರ್ವಾಹಕ ಇಟ್ಟುಕೊಂಡಿದ್ದಾರೆ. ಈ ವೇಳೆ ಚಿಲ್ಲರೆ ಕೊಡಿ ಎಂದು ಕೇಳಿದ್ದಕ್ಕೆ ಲಗೇಜ್ ಚಾರ್ಜ್ 15 ರೂಪಾಯಿ ಆಗುತ್ತದೆ ಎಂದು 200 ರೂ.ಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ನನಗೆ ಕನ್ನಡ ಸರಿಯಾಗಿ ಬರದ ಕಾರಣ ನಾನು ಹೆಚ್ಚಾಗಿ ಅವರೊಂದಿಗೆ ಚರ್ಚೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನನ್ನಂತೆ ಹಲವಾರು ಜನ ಭಾಷೆ ಬರದವರು ನಿಮ್ಮ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಅಂಥವರಿಗೆ ಇಂಥ ನಿರ್ವಾಹಕರಿಂದ ಅನ್ಯಾಯವಾದಂತೆ ನೋಡಿಕೊಳ್ಳಿ ಎಂದು ದೂರು ನೀಡಿದ್ದಾರೆ.
ಒಬ್ಬ ನಿರ್ವಾಹಕ 185 ರೂಪಾಯಿ ಟಿಕೆಟ್ ಕೊಟ್ಟು 200 ರೂಪಾಯಿಗೆ ಬೇಡಿಕೆ ಇಟ್ಟಿದ್ದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ ಜಶ್ಬಂತ್. ಇದು ನಿಜವಾಗಿಯೂ ಬಸ್ ದರವೇ? ನಾನು ವಾದಿಸುವಾಗ ಅವರು ಸಾಮಾನುಗಳಿಗೆ 15 ರೂ. ಹೆಚ್ಚುವರಿ ಕೇಳುತ್ತಿದ್ದೇನೆ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ. ಕನ್ನಡ ಗೊತ್ತಿಲ್ಲದ ನಮ್ಮಂಥ ಜನರನ್ನು ಇಂತಹ ನಿರ್ವಾಹಕರು ಮೂರ್ಖರನ್ನಾಗಿಸುತ್ತಿದ್ದಾರೆ. ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಕೆಲ ನಿರ್ವಾಹಕರು ಇಂಥ ಭ್ರಷ್ಟಾಚಾರಕ್ಕೆ ಕೈ ಹಾಕುತ್ತಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಏಕೆಂದರೆ ಒಬ್ಬಿಬ್ಬರು ನಿರ್ವಾಹಕರು ಮಾಡುವ ಇಂಥ ಕೆಲಸಕ್ಕೆ ಇಡಿ ನಿರ್ವಾಹಕ ಸಮುದಾಯವನ್ನೇ ಕೀಳಾಗಿ ನೋಡುವ ಪರಿಸ್ಥಿತಿ ಬರುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಬೀಳಬೇಕು ಎಂದು ಪ್ರಾಮಾಣಿಕ ನಿರ್ವಾಹಕರು ಒತ್ತಾಯಿಸಿದ್ದಾರೆ.
ಇನ್ನು ಈ ನಿರ್ವಾಹಕರು ಲಗೇಜ್ ಟಿಕೆಟ್ ಕೊಡದೆ ಎರಡು ಬ್ಯಾಗ್‌ಗಳಿಗೆ 15 ರೂಪಾಯಿ ಪಡೆದಿದ್ದರೆ ಅದು ತಪ್ಪು. ಇದನ್ನು ಯಾರು ಸಹಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಸಂಬಂಧಪಟ್ಟ ಚಿತ್ರದುರ್ಗ ಘಟಕದ ವ್ಯವಸ್ಥಾಪಕರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ನೀಡಬೇಕು ಎಂದಿದ್ದಾರೆ.