NEWSನಮ್ಮಜಿಲ್ಲೆಬೆಂಗಳೂರು

ಬಿಬಿಎಂಪಿ ಶಾಲೆಗಳ ಮುಚ್ಚಲು ಸರ್ಕಾರ ಪ್ರಯತ್ನ: ಎಎಪಿ ಡಾ.ಸತೀಶ್‌ ಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಡಿಟೆಕ್ಟಿವ್‌– ಸೆಕ್ಯೂರಿಟಿ ಏಜೆನ್ಸಿಗಳಿಂದ ಯಾವುದೇ ಟೆಂಡರ್‍ ಕರೆಯದೇ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಸತೀಶ್‌ ಕುಮಾರ್‌ ಹೇಳಿದ್ದಾರೆ.

ನಗರದ ಆಮ್ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಶಾಲೆಗಳಲ್ಲಿ ಕಳಪೆ ಫಲಿತಾಂಶ ದಾಖಲಾಗುತ್ತಿದ್ದರೂ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದರು.

ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಗುಣಮಟ್ಟಕ್ಕಿಂತ ಏಜೆನ್ಸಿಗಳ ಲಾಬಿಯೇ ಮುಖ್ಯವಾಗಿದೆ. ಹೊಸ ಟೆಂಡರ್‌ ಕರೆಯದೆ ನೇಮಕಾತಿ ಪ್ರಕ್ರಿಯೆಗೆ ಆದೇಶಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಶಿಕ್ಷಣ ಇಲಾಖೆ ಮೂಲಕವೇ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ನೀಡಿದ್ದ ಭರವಸೆಯನ್ನು ರಾಜ್ಯ ಸರ್ಕಾರ ಹುಸಿಗೊಳಿಸಿದೆ. ನುಡಿದಂತೆ ನಡೆವ ಸರ್ಕಾರ ಎಂದು ಬೀಗುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಗುತ್ತಿಗೆ ಲಾಬಿಗೆ ಒಳಗಾಗಿರುವುದು ವಿಪರ್ಯಾಸ ಎಂದು ಡಾ. ಸತೀಶ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹತ್ತಾರು ವರ್ಷಗಳಿಂದ ಡಿಟೆಕ್ಟಿವ್‌-ಸೆಕ್ಯೂರಿಟಿ ಏಜೆನ್ಸಿಗಳಿಂದಲೇ ಹೊರಗುತ್ತಿಗೆ ಮೇಲೆ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಇದರರ್ಥ ಶಿಕ್ಷಕರ ನೇಮಕಾತಿ ಹಿಂದೆ ದೊಡ್ಡ ಲಾಬಿಯಿದೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರಿದ್ದಾರೆ. ಶೀಘ್ರದಲ್ಲಿಯೇ ಅವರು ಯಾರೆಂದು ದಾಖಲೆಗಳ ಸಮೇತ ಬಹಿರಂಗಗೊಳಿಸಲಿದ್ದೇವೆ ಎಂದರು.

ಈಗ ಕೆಲಸ ಮಾಡುತ್ತಿರುವವರಲ್ಲಿ 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಲವಾರು ಮಂದಿ ಇದ್ದಾರೆ. ಈಗ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದರೆ ಅವರು ಎಲ್ಲಿಗೆ ಹೋಗಬೇಕು? ಎಂದು ಡಾ. ಸತೀಶ್‌ ಕುಮಾರ್‌ ಪ್ರಶ್ನಿಸಿದರು.

ದಕ್ಷಿಣ ಮತ್ತು ಆರ್‌.ಆರ್‌. ನಗರ ವಲಯದ ಶಿಕ್ಷಕರ ನೇಮಕಾತಿ ಟೆಂಡರ್‌ ಆಗಿದೆ. ಇದರಲ್ಲಿ 600 ಮಂದಿ ಶಿಕ್ಷಕರು ಇದ್ದಾರೆ. ಶಿಕ್ಷಕರನ್ನು ಮಾರುಕಟ್ಟೆ ಸರಕಿನಂತೆ ಬಳಸಿಕೊಳ್ಳುತ್ತಿರುವ ವಿಚಾರ ಶಿಕ್ಷಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಶಿಕ್ಷಕರು, ಉಪನ್ಯಾಸಕರು ಹೋರಾಟ ಮಾಡಲು ಮುಂದಾಗಿದ್ದಾರೆ. ಈಗ ಪಾಠ ಮಾಡುತ್ತಿರುವ ಶಿಕ್ಷಕರು, ಉಪಾನ್ಯಾಸಕರಲ್ಲಿ ಹಲವರು ಡಾಕ್ಟರೇಟ್ ‌ಸೇರಿದಂತೆ ಉನ್ನತ ವಿದ್ಯಾಭ್ಯಾಸ ಮಾಡಿದವರು. ಅಂಥವರನ್ನು ಬಿಟ್ಟು ಪತ್ತೆದಾರಿ‌ ಸಂಸ್ಥೆಯ ಮೂಲಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಕ್ರಮವೇ ಅಸಂಬದ್ಧ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 2024-25ನೇ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಇಲಾಖೆಯಿಂದ ಬಿಬಿಎಂಪಿ ಶಾಲೆ ಕಾಲೇಜುಗಳಿಗೆ ಶಿಕ್ಷಕರನ್ನು ಒದಗಿಸಲಾಗುವುದು. ಮೂಲ ಸೌಕರ್ಯಗಳನ್ನು ಬಿಬಿಎಂಪಿ ಒದಗಿಸಲಿದೆ ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಸುಮಾರು 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ಶಾಲೆ ಬಹಿಷ್ಕರಿಸಿ ಪ್ರತಿಭಟಿಸಿದ್ದರು.

ಆದರೆ ಇದಾವುದಕ್ಕೂ ಮಣಿಯದೆ ಅನರ್ಹ ಶಿಕ್ಷಕರಿದ್ದಾರೆ ಎಂದಿದ್ದರು. ಆದರೆ ಈಗ ಅದೇ ಶಿಕ್ಷಕರು ಅರ್ಹರಾಗಿದ್ದು ಹೇಗೆ? ಯಾವ ಮಾನದಂಡದ ಅಡಿಯಲ್ಲಿ ಶಿಕ್ಷಕರ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಲಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಜನತೆಗೆ ತಿಳಿಸಬೇಕು ಎಂದು ಎಂದು ಡಾ. ಸತೀಶ್ ಕುಮಾರ್‌ ಆಗ್ರಹಿಸಿದರು.

ಬಿಬಿಎಂಪಿ ಅಡಿಯಲ್ಲಿ 159 ಶಿಕ್ಷಣ ಸಂಸ್ಥೆಗಳಿವೆ. ಎಸ್ಎಸ್‌ಎಲ್‌ಸಿಯಲ್ಲಿ ಬಿಬಿಎಂಪಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿಯೇ ಅನುತ್ತೀರ್ಣರಾಗಿದ್ದಾರೆ. ಕನ್ನಡ ಓದಲು ಮತ್ತು ಬರೆಯಲು ಬರುತ್ತಿಲ್ಲ. ಇದು ಬಿಬಿಎಂಪಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತದೆ. ಶಿಕ್ಷಕರ ನೇಮಕಾತಿಯನ್ನು ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿದರೆ ಶಿಕ್ಷಣ ಕ್ಷೇತ್ರ ಎಂತಹ ಸ್ಥಿತಿಗೆ ತಲುಪುತ್ತದೆ? ಅವರು ನೇಮಕ ಮಾಡುವ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸುವುದು ಹೇಗೆ? ಎಂದು ಕೇಳಿದರು.

ಬೆಂಗಳೂರು ಯುವ ಘಟಕದ ಅಧ್ಯಕ್ಷ ಉಮೇಶ್ ಬಾಬು ಮಾತನಾಡಿ, ನಗರದ ಶ್ರೀರಾಂಪುರ ಬಾಲಕಿಯರ ಪ್ರೌಢಶಾಲೆಯ ಪಿ. ಚಂದನಾ 625ಕ್ಕೆ 619 ಅಂಕಗಳನ್ನು (ಶೇ 99) ಪಡೆದು ಪಾಲಿಕೆ ಶಾಲೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ದಾಖಲೆ ಬರೆದಿದ್ದಾರೆ. ಈ ಶಾಲೆಯನ್ನು ಭಾರತೀಯ ವಿದ್ಯಾಭವನ ಎಂಬ ಎನ್‌ಜಿಒ ನಡೆಸುತ್ತಿದೆ ಎಂಬುದು ಗಮನಾರ್ಹ.

ಕಳೆದ 10 ವರ್ಷಗಳಿಂದ ಶೇ 100 ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ. ಇಂತಹ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಎನ್‌ಜಿಒ/ಏಜೆನ್ಸಿಗಳ ಜೊತೆ ಉತ್ತಮ ಫಲಿತಾಂಶ ಪಡೆಯುವ ಕುರಿತು ಚರ್ಚಿಸಬೇಕು. ಅವರಿಗೆ ಶಾಲೆಗಳನ್ನು ವಹಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗಬೇಕು. ಪ್ರತಿ ಶಾಲೆಗಳಲ್ಲೂ ಶೇ 100 ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?