ಕೃಷ್ಣರಾಜಪೇಟೆ: ಅನ್ನದಾತರು ತಮ್ಮ ಕೃಷಿ ಭೂಮಿಯ ಪಹಣಿಯನ್ನು (RTC) ಆಧಾರ್ ನೊಂದಿಗೆ ಜೋಡಿಸಿಕೊಂಡು ಬೆಳೆ ವಿಮೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ತಹಸೀಲ್ದಾರ್ ನಿಸರ್ಗ ಪ್ರಿಯ ಕರೆ ನೀಡಿದರು.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಇಂದು ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಕಾರ್ಯ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ 4ಲಕ್ಷಕ್ಕೂ ಹೆಚ್ಚು ಆರ್‌ಟಿಸಿಗಳಿದ್ದು ಈವರೆಗೆ ಕೇವಲ 90 ಸಾವಿರ RTCಗಳು ಆಧಾರ್‌ಗೆ ಜೋಡಣೆಯಾಗಿವೆ. ಇನ್ನೂ ಶೇ.75ರಷ್ಟು RTCಗಳು ಆಧಾರ್‌ಗೆ ಜೋಡಣೆಯಾಗ ಬೇಕಾಗಿದೆ ಎಂದು ತಿಳಿಸಿದರು.
ಇನ್ನು ರೈತರು ತಮ್ಮ ಆಧಾರ್ ನೊಂದಿಗೆ ಆರ್‌ಟಿಸಿಯನ್ನು ಜೋಡಣೆ ಮಾಡಿಸಲು ತಮ್ಮ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರನ್ನು ಭೇಟಿ ಮಾಡಿ ಆಧಾರ್ ನೊಂದಿಗೆ RTC ಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ನಿಸರ್ಗ ಪ್ರಿಯ ಮನವಿ ಮಾಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋದಿಸಿದ ಅವರು, ಬಾಲ ಕಾರ್ಮಿಕ ಪದ್ಧತಿಯು ನಾಗರಿಕ ಸಮಾಜಕ್ಕೆ ಅಂಟಿರುವ ಶಾಪವಾಗಿದೆ. ಬಾಲ ಕಾರ್ಮಿಕ ಪದ್ದತಿಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.
ಶಾಲೆಗೆ ಹೋಗಿ ಶಿಕ್ಷಣದ ಜ್ಞಾನವನ್ನು ಪಡೆದುಕೊಂಡು ಆಟವಾಡಿಕೊಂಡು ಪಾಠ ಕಲಿತು ತಮ್ಮ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಂಡು ದೇಶದ ಭವಿಷ್ಯವಾಗುವ ಸಂದರ್ಭದಲ್ಲಿ ಮಕ್ಕಳನ್ನು ಕೆಲಸಕ್ಕೆ ದೂಡಿ ಮಕ್ಕಳ ಉಜ್ವಲ ಭವಿಷ್ಯವನ್ನು ಬಾಲ್ಯದಲ್ಲಿಯೇ ಚಿವುಟಿ ಹಾಕುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.
ಇಂದಿನ ಮಕ್ಕಳೇ ನಾಳಿನ ಭವಿಷ್ಯದ ನಾಯಕರಾಗುವುದರಿಂದ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡುವ ಜತೆಗೆ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಪಣ ತೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಮಿಕ ನಿರೀಕ್ಷಕ ಗಂಗಾಧರ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್,ರಾಜಶ್ವ ನಿರೀಕ್ಷಕರಾದ ರಾಜಮೂರ್ತಿ, ನರೇಂದ್ರ, ಚಂದ್ರಕಲಾ, ಗ್ರಾಮ ಆಡಳಿತ ಅಧಿಕಾರಿಗಳಾದ ಹರೀಶ್, ಜಗಧೀಶ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ