ಬೆಂಗಳೂರು: ಹಣವಿಲ್ಲದೆ ಉಚಿತವಾಗಿ ಚಿಕಿತ್ಸೆ ಕೊಡುತ್ತೇವೆ ಎಂದರೆ ಯಾರು ಅದನ್ನು ಅಷ್ಟಾಗಿ ನಂಬುವುದಿಲ್ಲ. ಇಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ಕೊಡುವುದಿಲ್ಲ ಎಂದು, ಹಣ ಎಷ್ಟಾದರೂ ಪರವಾಗಿಲ್ಲ ಅಂತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವವರೆ ಹೆಚ್ಚು.
ಆದರೆ, ಅಂತ ಸರ್ಕಾರಿ ಆಸ್ಪತ್ರೆಗಳೆಂದ್ರೆ ಮೂಗು ಮುರಿಯುವವರಿಗೆ ಇಲ್ಲಿ ಶಾಕ್ ಆಗೋದು ಗ್ಯಾರಂಟಿ. ಹೌದು! ಸರ್ಕಾರಿ ಆಸ್ಪತ್ರೆಗಳ ಮೇಲಿನ ಜನರ ಭಾವನೆ ಬದಲಾಗಬೇಕು. ಏಕೆಂದರೆ ನಗರದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 15 ದಿನದ ಹಸುಳೆಗೆ ಹಾರ್ಟ್ ಆಪರೇಷನ್ ಮಾಡಿ ಸಕ್ಸಸ್ ಆಗಿದ್ದಾರೆ ವೈದ್ಯರು. ಈ ಮೂಲಕ ಸಾವಿನೆಳೆಯಿಂದ ಮಗು ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದೆ.
ಕೆಲ ದಿನಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆಯಿಂದ ಬಳತ್ತಿದ್ದ 15 ದಿನದ ಮಗುವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದಾಖಲಿಸಿದ ಮಗು ಆರು ತಿಂಗಳಿಗೆ ಹುಟ್ಟಿದ್ದು, ಮಗುವಿನ ಹೃದಯದಲ್ಲಿ ಹೋಲ್ ಇತ್ತು. ಇದರಿಂದ ಮಗುವಿನ ಉಸಿರಾಟಕ್ಕೆ ಸಮಸ್ಯೆಯಾಗುತ್ತಿತ್ತು.
ಹುಟ್ಟಿದಾಗಿನಿಂದಲೇ ವೆಂಟಿಲೇಶನ್ನಲ್ಲೇ ಇರಿಸಲಾಗಿತ್ತು. ಇನ್ನು ಮಗುವಿಗೆ ಹೋಲ್ ಇದ್ದಿದ್ದರಿಂದ ಅದು ಉಳಿಯೋದೇ ಇಲ್ಲ ಅಂತ ಪೋಷಕರು ಹೆದರಿದ್ರು. ಜತೆಗೆ ಮಗುವನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕು ಪಾಲಕರು ಹಲವಾರು ಖಾಸಗಿ ಆಸ್ಪತ್ರೆಗಳನ್ನು ಸುತ್ತಿದ್ರು. ಆದರೆ ಅಲ್ಲಿ ಇವರ ಬಜೆಟ್ಗೆ ಚಿಕಿತ್ಸೆ ಸಿಗಲಿಲ್ಲ.
ಕೊನೆಗೆ ಏನಾದರೂ ಆಗಲಿ ಎಂದು ದೇವರ ಮೇಲೆ ಭಾರಹಾಕಿ ಇಂದಿರಾ ಗಾಂಧಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದು ಸದ್ಯ ಹಾರ್ಟ್ ಸಮಸ್ಯೆಗೆ ಸರ್ಜರಿ ಮಾಡಿ ಮಗುವನ್ನು ವೈದ್ಯರು ಉಳಿಸಿದ್ದಾರೆ. ಈ ಮಗುವಿಗೆ ಪಿಡಿಎ ಲೈಗೇಷನ್ ಸರ್ಜರಿ ಮಾಡಿದ್ದು, ಸಾವಿನಂಚಿನಿಂದ ಮಗು ಸದ್ಯ ಪಾರಾಗಿದೆ.
ಈ ಮಗು ಹುಟ್ಟಿದಾಗಲೇ ಕ್ರಿಟಿಕಲ್ ಕಂಡಿಷನ್ನಲ್ಲಿ ಇತ್ತು. ಇದೀಗಾ ಮಗು ಆರಾಮಾಗಿದೆ. ಇನ್ನು ಮಗುವಿನ ಅಪರೇಷನ್ಗೆ ಖಾಸಗಿ ಆಸ್ಪತ್ರೆಯವರು 30 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ ಎಂದು ಹೇಳಿದ್ದರು. ಆದರೆ, ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೇವಲ 7 ಸಾವಿರ ರೂಪಾಯಿಯಲ್ಲೇ ಸರ್ಜರಿ ಆಗಿದೆ ಎಂದು ಪಾಲಕರು ಸಂತಸ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲೆ ನಮಗೆ ಇಷ್ಟು ದಿನ ಸರ್ಕಾರಿ ಆಸ್ಪತ್ರೆ ಅಂದ್ರೆ ಅಷ್ಟೊಂದು ನಂಬಿಕೆ ಇರಲಿಲ್ಲ. ಆದ್ರೆ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ನಮ್ಮ ಮಗುವಿನ ಬಗ್ಗೆ ತೆಗೆದುಕೊಂಡ ಜಾಗೃತಿ ನೋಡಿ ತುಂಬ ಖುಷಿಯಾಗುತ್ತಿದೆ. ನಮ್ಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ 800 ಗ್ರಾಂ ಇತ್ತು. ಇದನ್ನು ನಿಭಾಯಿಸುವುದು ಕಷ್ಟವಾಗಿತ್ತು. ಆದರೆ ಅಂತಹ ಕ್ರಿಟಿಕಲ್ ಸಂದರ್ಭದಲ್ಲೂ ಮಗುವಿಗೆ ಸರ್ಜರಿ ಮಾಡಿ ಜೀವ ಉಳಿಸಿದ್ದಾರೆ ವೈದ್ಯರು.
ಇದನ್ನು ನೋಡಿದ ಮೇಲೆ ಸರ್ಕಾರಿ ಆಸ್ಪತ್ರೆಯಲ್ಲೀ ಬಡವರ ಜೀವ ಉಳಿಯುತ್ತೆ ಎನ್ನುವ ನಂಬಿಕೆ ಹೆಚ್ಚಾಗಿದೆ. ಅಲ್ಲದೆ ಆರ್ಥಿಕವಾಗಿ ಸಬಲರಾಗದವರು ಸಾಲ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದೆ ಉಚಿತವಾಗಿ ಇಲ್ಲ ಕಡಿಮೆ ಹಣದಲ್ಲಿ ಚಿಕಿತ್ಸೆ ಸಿಗುವ ನಮ್ಮ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕು ಎಂದು ಮಗುವಿನ ಪಾಲಕರು ಮನವಿ ಮಾಡಿದ್ದಾರೆ.
ಮಗುವಿನ ಪ್ರಾಣವೇ ಉಳಿಯೋದಿಲ್ಲ ಅಂತ ನಂಬಿಕೆ ಕಳೆದುಕೊಂಡಿದ್ದ ಪಾಲಕರಿಗೆ ಮಗು ಉಳಿದುಬಂದಿದ್ದು, ಸರ್ಕಾರಿ ಆಸ್ಪತ್ರೆಗಳ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ಇನ್ನು 15 ದಿನ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಮತ್ತು ವೈದ್ಯರು ಯಶಸ್ವಿಯಾಗಿದ್ದು ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಕ್ಕೆ ನಂಬಿಕೆ ಹೆಚ್ಚಿಸಿದೆ.