ಬೆಂಗಳೂರು ಗ್ರಾಮಾಂತರ: ಪಡಿತರ ವಿತರಣೆಯಲ್ಲಿ ಯಾವುದೇ ಅವ್ಯವಸ್ಥೆ ಹಾಗೂ ಅವ್ಯವಹಾರಕ್ಕೆ ಅವಕಾಶವಿಲ್ಲ. ಮೋಸ ಮಾಡಿದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದರೆ, ಸಂಬಂಧಪಟ್ಟ ಪಡಿತರ ವಿತರಕರುಗಳ ಪರವಾನಗಿ ರದ್ದು ಮಾಡುವ ಮೂಲಕ ಅಗತ್ಯ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ನಗರದಲ್ಲಿರುವ ವಿವಿಧ ನ್ಯಾಯ ಬೆಲೆ/ಪಡಿತರ ಅಂಗಡಿಗಳಿಗೆ ಹಾಗೂ ಟಿಎಪಿಎಂಸಿ ಉಗ್ರಾಣಕ್ಕೆ ಭೇಟಿ ನೀಡಿ, ಅಕ್ಕಿ, ಗೋಧಿಯನ್ನು ವೀಕ್ಷಿಸಿ, ತೂಕ ಮತ್ತು ಗುಣಮಟ್ಟವನ್ನು ಪರಿಶೀಲಿಸಿ ಮಾತನಾಡಿದರು.
ಕೊರೋನಾ ವೈರಾಣು ಸೋಂಕು ಪಸರಿಕೆ ತಡೆಯಲು ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಎಲ್ಲಾ ರೀತಿಯ ಕೂಲಿಕಾರ್ಮಿಕರಿಗೆ, ಬಡವರಿಗೆ ಹಾಗೂ ನಿರ್ಗತಿಕರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಪೂರೈಸಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, ರಾಜ್ಯಕ್ಕೆ ಬೇಕಾದ ಆಹಾರ ಧಾನ್ಯಗಳಿಗೆ ಸದ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಕೋವಿಡ್-19 ಹರಡುವಿಕೆ ಭೀತಿಯಿಂದಾಗಿ ಇಡೀ ರಾಜ್ಯ ಸಂಕಷ್ಟದಲ್ಲಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಮಾನವೀಯತೆಯಿಂದ ಕೆಲಸ ಮಾಡಬೇಕು ಎಂಬ ಮನವಿಯೊಂದಿಗೆ, ಬಡವರಿಗೆ ಮೋಸ ಆಗದಂತೆ ಪಡಿತರ ವಿತರಣೆ ಮಾಡಬೇಕೆಂದು ಪಡಿತರ ವಿತರಕರುಗಳಿಗೆ ಎಚ್ಚರಿಕೆ ನೀಡಿದರು.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬಂದ ಬಡವರಿಗೆ ಓಟಿಸಿ ಪಡೆಯದೆ ಮ್ಯಾನುಯಲ್ ಆಗಿ ಪಡಿತರ ವಿತರಿಸಬೇಕು. ಯಾರಿಗೂ ಪಡಿತರ ಇಲ್ಲ ಎಂದು ಹಿಂದೆ ಕಳುಹಿಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಒಂದು ವೇಳೆ ಪಡಿತರ ವಿತರಣೆಗೆ ಓಟಿಸಿ ಪಡೆದರೆ ವಿತರಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದರು.
ರಾಜ್ಯದ ಪಡಿತರವನ್ನು ವಿತರಿಸಿದ ಕೂಡಲೇ, ಕೇಂದ್ರ ಸರ್ಕಾರ ಘೋಷಿಸಿರುವ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ಮತ್ತು ತೊಗರಿಬೇಳೆ ವಿತರಣೆಯನ್ನು ಈ ತಿಂಗಳ ಅಂತ್ಯದಲ್ಲಿ ಆರಂಭಿಸಲಾಗುವುದು. ಪಡಿತರ ಸಿಗದೆ ಯಾರಿಗೂ ತೊಂದರೆಯಾಗಬಾರದೆಂಬ ಉದ್ದೇಶದಿಂದ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ಹಾಗೂ ಬಯೋಮೆಟ್ರಿಕ್ ಇಲ್ಲದ ಕುಟುಂಬಗಳಿಗೆ ಪಡಿತರ ವಿತರಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರಲ್ಲದೆ, ಹೊಸದಾಗಿ ಅರ್ಜಿ ಸಲ್ಲಿಸಿರುವ 1.89 ಲಕ್ಷ ಅರ್ಜಿದಾರರಿಗೆ ಮೂರ್ನಾಲ್ಕು ದಿನಗಳಲ್ಲಿ ಆಹಾರ ಧಾನ್ಯ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪಡಿತರ ವಿತರಣೆ ವೇಳೆ ವಿತರಕರು, ಗ್ರಾಹಕರು ಅಂತರ ಕಾಯ್ದುಕೊಳ್ಳಬೇಕು ಎಂದರಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳಿ ಪಡಿತರ ವಿತರಣಾ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಆರ್.ಡಿ.ಸುಬ್ರಹ್ಮಣ್ಯ, ನೆಲಮಂಗಲ ತಾಲ್ಲೂಕು ತಹಸೀಲ್ದಾರ್ ಶ್ರೀನಿವಾಸಯ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.