ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಜನವರಿ-2024 ರಿಂದ ಪೇಬ್ರವರಿ-2024ರವರೆಗೆ ಬಾಕಿ ಇದ್ದ ಶೇ.3.75 ರಷ್ಟು ತುಟ್ಟಿ ಭತ್ಯೆ ಹಿಂಬಾಕಿ ಪಾವತಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ನಿಗಮದ ಹುಮನಬಾದ & ಹಗರಿಬೊಮ್ಮನಹಳ್ಳಿಯಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರು, ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯನಿರ್ವಾಹಕ ಅಭಿಯಂತರರು. ಕಲಬುರಗಿ & ಬಳ್ಳಾರಿ ವಿಭಾಗ, ಯಾದಗಿರಿ ಪ್ರಾದೇಶಿಕ ಕಾರ್ಯಾಗಾರ ಕಾರ್ಯವ್ಯವಸ್ಥಾಪಕರಿಗೂ ಸೂಚಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ. 01-01-2024 ರಿಂದ 29-02-2024 ವರೆಗೆ ಎರಡು ತಿಂಗಳ ಶೇ.3.75 ರಷ್ಟು ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ಅರ್ಹ ಅಧಿಕಾರಿ/ನೌಕರರಿಗೆ ಪಾವತಿಸುವಂತೆ ಸೂಕ್ತಾಧಿಕಾರಿ ವ್ಯವಸ್ಥಾಪಕ ಅನುಮೋದನೆ ನೀಡಿದ್ದಾರೆ. ಅದರನ್ವಯ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಶೇ.35 ರಿಂದ 38.75 (ಶೇ.3.75) ಹೆಚ್ಚಿಗೆ ಆಗಿದ್ದ (ಜುಲೈ-2023 ರಿಂದ ಪೂರ್ವಾನ್ವಯವಾಗುವಂತೆ) ತುಟ್ಟಿ ಭತ್ಯೆಯನ್ನು ನವೆಂಬರ್-2023 ವೇತನದಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ ಜುಲೈ-2023 ರಿಂದ ಅಕ್ಟೋಬರ್-2023 ರ ವರೆಗಿನ ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ಮಾರ್ಚ್-2024 ರಿಂದ ಜೂನ್-2024 ವರೆಗೆ ಈಗಾಗಲೆ ಪಾವತಿಸಲಾಗಿದೆ.
ಆದರೆ, ಜನವರಿ-2024ರ ಮತ್ತು ಪೇಬ್ರವರಿ-2024ರ ಮಾಹೆಯ ತುಟ್ಟಿ ಭತ್ಯೆ ಬಾಕಿ ಇದ್ದು ಅದನ್ನು ವೇತನದೊಂದಿಗೆ ಪ್ರತಿ ತಿಂಗಳು ಒಂದೊಂದು ಕಂತನ್ನು (ಉದಾ: ಜುಲೈ-2024 ರ ಮಾಹೆಯ ವೇತನದೊಂದಿಗೆ ಜನವರಿ ತಿಂಗಳಿನ ಹಿಂಬಾಕಿ ಮೊತ್ತವನ್ನು ಹಾಗೂ ಆಗಸ್ಟ್-2024ರ ವೇತನದೊಂದಿಗೆ ಪೇಬ್ರವರಿ ತಿಂಗಳ ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು) ಸೇರಿಸಿ ಪಾವತಿಸಬೇಕು ಎಂದು ಆದೇಶ ಮಾಡಿದ್ದಾರೆ.
ಇನ್ನು 01-07-2024 ರಿಂದ 31-08-2024 ರ ವರೆಗೆ ಸೇವಾ ವಿಮುಕ್ತಿ ಹೊಂದುವ ಅರ್ಹ ಅಧಿಕಾರಿ/ ನೌಕರರಿಗೆ ಎರಡು ತಿಂಗಳ ಶೇ.3.75ರ ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ಕೊನೆಯ ವೇತನದೊಂದಿಗೆ ಒಂದೇ ಕಂತಿನಲ್ಲಿ ಪಾವತಿಸಬೇಕು. ಅಲ್ಲದೆ ಈ ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ಪಾವತಿಸುವಾಗ ಶಾಸನಬದ್ಧ ಕಡಿತಗಳಾದ ಭವಿಷ್ಯ ನಿಧಿ, ಆದಾಯ ತೆರಿಗೆ, ವೃತ್ತಿ ತೆರಿಗೆ ಹಾಗೂ ಇನ್ನಿತರ ಕಡಿತಗಳನ್ನು ಅವಶ್ಯಕತೆ ಇದ್ದಲ್ಲಿ ಕಡಿತಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.