ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಬೂದಿಮುಚ್ಚಿದ ಕೆಂಡಂತೆ ಹೊಗೆಯಾಡುತ್ತಿರುವ ಹಾಗೂ ಮೈಸೂರು ಮುಡಾ ಹಗರಣ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇದ್ದರೆತಾನೇ ಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡಬೇಕಿರೋದು. ಇದನ್ನು ನಾನು ಹಲವು ಬಾರಿ ಹೇಳುತ್ತಲೇ ಇದ್ದೇನೆ ಆದರೂ ಆ ಬಗ್ಗೆ ಕೆಲವರು ಏಕೆ ಮಾತನಾಡುತ್ತಾರೆ ಎಂಬುವುದು ಈವರೆಗೂ ಗೊತ್ದುತಾಗುತ್ತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಇನ್ನು ಯಾವ ಕಾರಣಕ್ಕೆ ಸರ್ಕಾರ ಬೀಳುತ್ತೆ ಅಂತಾ ನೀವೇ ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರ ಯಾವುದೇ ಪಾತ್ರ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಬದಲಿ ಸೈಟ್ ಕೊಡಲಾಗಿದೆ. ಈಗಲೂ ಸಿಎಂ ಸಿದ್ದರಾಮಯ್ಯರಿಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದರು.
ಇನ್ನೂ ಬಿಜೆಪಿಯವರಿಗೆ ಮಾಡಲು ಏನೂ ಕೆಲಸ ಇಲ್ಲ. ಅದಕ್ಕಾಗಿಯೇ ಏನಾದರೂ ವಿಷಯ ಇಟ್ಟುಕೊಂಡು ಅದನ್ನೇ ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನು ಕಂಡರೆ ಆಗಲ್ಲ. ಅದಕ್ಕಾಗಿಯೇ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.