ವಿಜಯಪುರ: ಚಲಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿಎ ಗ್ರಾಮದಲ್ಲಿ ನಡೆದಿದೆ.
ಸಿಂದಗಿ ಪಟ್ಟಣದ ಎಚ್.ಜಿ.ಹೈಸ್ಕೂಲ್ನ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂದೀಪ ಗಿಡ್ಡನಗೋಳ (16) ಮೃತ ವಿದ್ಯಾರ್ಥಿ.
ಸೋಮವಾರ ಬೆಳಗ್ಗೆ ದುರ್ಘಟನೆ ನಡೆದಿದೆ. ಚಲಿಸುತ್ತಿದ್ದ ಬಸ್ನಿಂದ ಕೆಳಗೆ ಬಿದ್ದು ಹಿಂಬದಿ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗಿನಿಂದ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ಸಂದೀಪ ಕೊನೆಯುಸಿರೆಳೆದಿದ್ದಾನೆ.
ವಿದ್ಯಾರ್ಥಿ ಸಾವಿಗೆ ಚಾಲಕ, ನಿರ್ವಾಹಕರ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಗ್ರಾಮದ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಚಾಲಕ, ನಿರ್ವಾಹಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಮತ್ತೊಂದೆಡೆ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಬನ್ನಿಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿತು.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸಿಂದಗಿ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡು
ಶಕ್ತಿ ಯೋಜನೆ ಬಳಿಕ ವಿದ್ಯಾರ್ಥಿಗಳು ಬಸ್ನಲ್ಲಿ ಪ್ರಯಾಣಿಸಲು ಆಗುತ್ತಿಲ್ಲ: ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಬಸ್ಗಳು ಮಹಿಳಾ ಪ್ರಯಾಣಿಕರಿಂದ ತುಂಬಿತುಳುಕುತ್ತಿವೆ. ಇದರಿಂದ ವಿದ್ಯಾರ್ಥಿಗಳು ಹಿಂದಿನಂತೆ ಬಸ್ನಲ್ಲಿ ಪ್ರಯಾಣಿಸಲು ಆಗುತ್ತಿಲ್ಲ. ಬಸ್ ಹಿಂಬದಿ ಡೂರ್ನಲ್ಲಿ ನಿಂತು ಅಪಾಯಕಾರಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ.
ಇತ್ತ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಬಿಡುವಂತೆ ಒತ್ತಾಯಿಸಿದರೂ ಕೇರ್ ಮಾಡದ ಸಾರಿಗೆ ಇಲಾಖೆ. ಇದರಿಂದ ನೂಕುನುಗ್ಗಲಿನ ಬಸ್ನಲ್ಲಿ ವಿದ್ಯಾರ್ಥಿಗಳು ಪ್ರಯಾಣ ಮಾಡಿ ಅನ್ಯಾಯವಾಗಿ ದುರ್ಮರಣಕ್ಕೀಡಾಗುತ್ತಿದ್ದಾರೆ. ವಿದ್ಯಾರ್ಥಿಗಳ ಸಾವಿಗೆ ಹೊಣೆ ಯಾರು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಮೃತಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.