ಬೆಂಗಳೂರು: ನೌಕರರಿಗೆ ಕಿರುಕುಳ, ಲಂಚಾರೋಪ, ಸಂಸ್ಥೆಯಲ್ಲಿ ಭ್ರಷ್ಟಾಚಾರ ವೇಸಗಿದ ಆರೋಪಡಿ ಅಮಾನತಾಗಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೂವರು ಅಧಿಕಾರಿಗಳ ಅಮಾನತು ತೆರವುಗೊಳಿಸಿ ಸ್ಥಳ ನಿಯೋಜನೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಕೂಡಲೇ ಡ್ಯೂಡಿಗೆ ಹಾಜರಾಗಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಶುಕ್ರವಾರ (ಆ.16) ಅಮಾನತಿನಿಂದ ತೆರವುಗೊಂಡ ಅಧಿಕಾರಿಗಳ ನಿಯೋಜನೆ ಕುರಿತು ಆದೇಶ ಹೊರಡಿಸಿರುವ ಸಿಪಿಎಂ ಆದೇಶದಲ್ಲಿ ಅಮಾನತಿನಿಂದ ತೆರವುಗೊಂಡ ಈ ಅಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರಿಗಳ ಆದೇಶದನ್ವಯ ಅವರು ಸೂಚಿಸಿರುವ ಸ್ಥಳಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಮಾನತಿನ ಪೂರ್ವದಲ್ಲಿ ಬಿಎಂಟಿಸಿಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರಾಗಿದ್ದ ಅಬ್ದುಲ್ ಖುದ್ದೂಸ್, (ದರ್ಜೆ-1 ಆಯ್ಕೆಶ್ರೇಣಿ) ಅವರ ಅಮಾನತು ತೆರವುಗೊಳಿಸಿದ್ದು ಕೂಡಲೇ ಕೆಎಸ್‌ಆರ್‌ಟಿಸಿಯ ಚಿಕ್ಕಮಗಳೂರಿನಲ್ಲಿರುವ ಪ್ರಾಂಶುಪಾಲರು ಪ್ರಾದೇಶಿಕ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಇನ್ನು ಕೆಎಸ್‌ಆರ್‌ಟಿಸಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿದ್ದ ಬಿ.ಎಸ್. ಶಿವಕುಮಾರಯ್ಯ (ದರ್ಜೆ-1 ಆಯ್ಕೆಶ್ರೇಣಿ) ಅವರ ಅಮಾನತನ್ನೂ ತೆರವುಗೊಳಿಸಲಾಗಿದ್ದು, ಈ ಕೂಡಲೇ ತಾವು ಹೊಳಲ್ಕೆರೆಯಲ್ಲಿರುವ ಕೆಎಸ್‌ಆರ್‌ಟಿಸಿಯ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಕೆ.ಆರ್. ಬಸವರಾಜು (ದರ್ಜೆ-1 ಹಿರಿಯ) ಅವರ ಅಮಾನತನ್ನು ತೆರವುಗೊಳಿಸಿದ್ದು ಕೂಡಲೇ ಹಗರಿಬೊಮ್ಮನಹಳ್ಳಿಯಲ್ಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಅಧಿಕಾರಿ ವಹಿಸಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ.
ಈ ಮೂವರು ಅಧಿಕಾರಿಗಳು ಸಂಸ್ಥೆಗೆ ಮತ್ತು ಸಂಸ್ಥೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಂದ ಲಂಚ ಪಡೆದ ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಅಮಾನತಾಗಿದ್ದರು. ನಿನ್ನೆ ಅವರ ಅಮಾನತನ್ನು ತೆರವುಗೊಳಿಸಿ ಸಿಪಿಎಂ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಆದರೆ, ಇನ್ನು ಮುಂದಾದರೂ ಈ ಅಧಿಕಾರಿಗಳು ಸಂಸ್ಥೆಗೆ ಮತ್ತು ಸಿಬ್ಬಂದಿಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುವಂತ ಕೆಲಸ ಮಾಡುವ ಮೂಲಕ ಒಳ್ಳೆಯ ಅಧಿಕಾರಿಗಳಾಗಿ ಮುನ್ನಡೆಯಬೇಕು. ಇದನ್ನು ಬಿಟ್ಟು ಮತ್ತೆ ಹಳೇ ಚಾಳಿಯನ್ನೇ ಮುಂದುವರಿಸಿದರೆ ಅದರ ಪರಿಣಾಮ ಇದಕ್ಕಿಂತ ವಿಭಿನ್ನವಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಈಗಾಗಲೇ ಸಂಸ್ಥೆ ರವಾನಿಸಿದೆ.