ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು-ನೌಕರರಿಗೆ 2023 ಮಾರ್ಚ್ನಲ್ಲಿ ಸಂಬಳ ಹೆಚ್ಚಳ ಮಾಡಿದ್ದೀರಾ ಅಂದರೆ ಬರೋಬರಿ 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡದೆ, ಅದಕ್ಕೆ ಬೇಕಾದ ಅನುದಾನವನ್ನು ನೀಡದೆ ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿ ಹೋಗಿರುವ ನಿಮಗೆ ಯಾವ ನೈತಿಕತೆ ಇದೆ ಎಂದು ಬಿಜೆಪಿಗರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನೋಡಿ ಕರ್ನಾಟಕ ಬಿಜೆಪಿ ಅವರೇ ನಿಮಗೆ ಸ್ವಲ್ಪವೂ ಕೂಡ ಅಂಜಿಕೆ, ಅಳುಕು ಇಲ್ಲವೇ.. ಮನುಷ್ಯರಾದವರಿಗೆ ಯಾವುದೇ ಒಂದು ಕ್ಷಣದಲ್ಲಾದರೂ ಯಾವುದಾದರೂ ಒಂದು ಸಂದರ್ಭದಲ್ಲಿಯಾದರೂ ತಮ್ಮ ತಪ್ಪಿನ ಅರಿವಾಗಬೇಕು. ಪಾಪ ಪ್ರಜ್ಞೆ ಕಾಡಬೇಕು. ಆದರೆ ಇದ್ಯಾವುದೂ ಇಲ್ಲದೆ ಹೀಗೆ ಸುಖಾಸುಮ್ಮನೆ ದಿನಂಪ್ರತಿ ಸುಳ್ಳುಗಳನ್ನೇ ನಿಜವೆಂದು ಬಿಂಬಿಸುವಂತೆ ಟ್ಟೀಟ್ ಮಾಡಿ ಏನನ್ನು ಬಿಂಬಿಸಲು ಹೊರಟ್ಟಿದ್ದೀರಾ ಎಂದು Xನಲ್ಲಿ ಪ್ರಶ್ನಿಸಿದ್ದಾರೆ.
ತಮ್ಮ ಬಿಜೆಪಿ ಸರ್ಕಾರವು ಬಿಟ್ಟು ಹೋಗಿದ್ದ ₹5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಗ್ರಿಗಳ ಹಣ ಸೇರಿ ಎಲ್ಲ ಬಾಕಿಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸ ಬೇಕಾಗಿದೆ.
ಇನ್ನು ಕೋವಿಡ್ ಸಮಯದಲ್ಲಿ ಬಸ್ಸುಗಳ ಕಾರ್ಯಾಚರಣೆ ಆಗದೆ ತಮ್ಮ ಸರ್ಕಾರ ಸಾರಿಗೆ ಸಿಬ್ಬಂದಿಗಳಿಗೆ ಸಂಬಳ ಮಾತ್ರ ನೀಡಿ, ಭವಿಷ್ಯ ನಿಧಿ, ಎಲ್ಐಸಿ, ಸೊಸೈಟಿ ಹಾಗೂ ಇತರೆ ಯಾವುದೇ ಕಡಿತಗಳ ಹಣವನ್ನು ಸಾರಿಗೆ ನಿಗಮಗಳಿಗೆ ಪಾವತಿ ಮಾಡಿಲ್ಲ ಇದರಿಂದ ನಿಮ್ಮ ಪಾಪದ ಕೂಸು ಈಗ ಬೆಳೆದು ನಿಂತಿದೆ ಎಂದು ಕಿಡಿಕಾರಿದ್ದಾರೆ.
ನಮ್ಮ ಸರ್ಕಾರದ ಕೊನೆಯಲ್ಲಿ ಅಂದರೆ ಮೇ 2018ರ ಅಂತ್ಯಕ್ಕೆ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ಬಾಕಿ ಇದ್ದದ್ದು( ಕೋಟಿ ರೂ.ಗಳಲ್ಲಿ )
KSRTC – ₹೦.೦೦
BMTC – ₹೦.೦೦
NWKRTC – ₹13.71
KKRTC – ೦.೦೦
ಅದೇ 2023ರ ಮೇ ಅಂತ್ಯಕ್ಕೆ ತಮ್ಮ ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳಲ್ಲಿ ಬಾಕಿ ಇಟ್ಟು ಹೋಗಿದ್ದ ಭವಿಷ್ಯ ನಿಧಿ ಮೊತ್ತ ( ಕೋಟಿ ರೂ.ಗಳಲ್ಲಿ)
KSRTC – ₹659.57
BMTC – ₹111.47
NWKRTC – ₹609.55
KKRTC – ₹0.00
(Total ₹1380. 59 ಕೋಟಿ ಭವಿಷ್ಯ ನಿಧಿ ಮಾತ್ರ ಬಾಕಿ)
ಈ ಎಲ್ಲದರ ನಡುವೆ ತಮ್ಮ ಕಾಲದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ 2020 ಜನವರಿಯಲ್ಲಿ ಮಾಡಬೇಕಿದ್ದ ಸಂಬಳವನ್ನು ಏರಿಕೆ ಮಾಡದೆ, 15 ದಿನಗಳ ಕಾಲ ಯಶಸ್ವಿ ಸಾರಿಗೆ ಮುಷ್ಕರ ಮಾಡಿಸಿ, ರಾಜ್ಯದ ಜನ ಬಸ್ ಸಂಚಾರ ಇಲ್ಲದೆ ಕಷ್ಟಪಟ್ಟಿದ್ದು ತಮ್ಮ ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ನಮ್ಮ ಬಗ್ಗೆ ಮಾತನಾಡುತ್ತೀರಿ ನೋಡಿ ನಾವು ಎಂದು ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಹೇಳಿಲ್ಲ ಆದಾಯ ವೃದ್ದಿಯಾಗಿದೆ ಎಂದಷ್ಟೇ ಹೇಳಿರುವುದು. ನಿಮಗೆ ಅಂದರೆ ಬಿಜೆಪಿ ಅವರಿಗೆ ಲಾಭ/ ನಷ್ಟ, ಆದಾಯ / ವೆಚ್ಚ ಇದ್ಯಾವುದರ ಬಗ್ಗೆ ಜ್ಞಾನವೇ ಇಲ್ಲದಿರುವಾಗ, ನಿಮಗೆ ನಾವು ಲೆಕ್ಕಪತ್ರ ಪಾಠ ಮಾಡಲು ಸಾಧ್ಯವೇ ಎಂದು ತಿರುಗೇಟು ನೀಡಿದ್ದಾರೆ.