ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಆರೋಗ್ಯ ಯೋಜನೆಯು ಸಾರಿಗೆ ನೌಕರರ ದಶಕಗಳ ಬೇಡಿಕೆಯಾಗಿತ್ತು. ಅದನ್ನು ಸಾಕಾರಗೊಳಿಸಲು ನಿಗಮವು ಕರ್ನಾಟಕ ರಾಜ್ಯಾದ್ಯಂತ ಇಂದಿನವರೆಗೆ 314 ಆಸ್ಪತ್ರೆಗಳೊಂದಿಗೆ ಒಡಂಬಂಡಿಕೆ ಮಾಡಿಕೊಂಡಿದೆ.
ಈ ಯೋಜನೆಯು ನಿಗಮದ ಅತಿ ದೊಡ್ಡ ಯೋಜನೆಯಾಗಿದ್ದು, 34000ಕ್ಕೂ ಹೆಚ್ಚು ಸಿಬ್ಬಂದಿಗಳು, ಅವರ ಪತಿ/ಪತ್ನಿ ಮಕ್ಕಳು, ತಂದೆ ತಾಯಿ ಒಳಗೊಂಡಂತೆ ಸರಿ ಸುಮಾರು 1.50 ಲಕ್ಷ ಫಲಾನುಭವಿಗಳಿಗೆ ಈ ಎಲ್ಲ ಆಸ್ಪತ್ರೆಗಳೊಂದಿಗೆ ಪ್ರತಿ ನಿಮಿಷ ವ್ಯವಹರಿಸಿ ಉತ್ತಮ ಆರೋಗ್ಯ ಸೇವೆ ಒದಗಿಸುವುದಾಗಿದೆ.
ಈ ಯೋಜನೆಯು ಪ್ರಾರಂಭಗೊಂಡು ಜ.16ಕ್ಕೆ 10 ದಿವಸಗಳಷ್ಟೇ ಆಗಿದೆ. ಇಲ್ಲಿಯವರೆಗೆ ಅಂದರೆ ಜ.17 ಬೆಳಗ್ಗೆ 11 ಗಂಟೆಯವರೆಗೆ ಸರಿಸುಮಾರು 1280 ಸಿಬ್ಬಂದಿಗಳು ಆರೋಗ್ಯ ಸೇವೆ ಪಡೆದಿದ್ದು, ಅವರಲ್ಲಿ 243 ಒಳರೋಗಿಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದು ಮೊತ್ತ 56,56,639 ರೂ.ಗಳಾಗಿದೆ. ಇನ್ನು ಹೊರ ರೋಗಿಗಳಾಗಿ ಒಟ್ಟು 1047 ಸಿಬ್ಬಂದಿಗಳು ಸೇವೆ ಪಡೆದಿದ್ದು ಮೊತ್ತ 11,66,487 ರೂ.ಗಳಾಗಿದೆ. ಈ ಕಳೆದ 10 ದಿನಗಳ ಒಟ್ಟು ಮೊತ್ತ 68,23,126 ರೂ.ಗಳಾಗಿದೆ.
ಇನ್ನು ಈ ಯೋಜನೆಯಲ್ಲಿ ಆಸ್ಪತ್ರೆಗಳ ಸಹಕಾರ ಬಹಳ ಮುಖ್ಯವಾಗಿದೆ. ಕೆಲವೊಂದು ಸಣ್ಣಪುಟ್ಟ ವ್ಯತ್ಯಾಸಗಳು ಪ್ರಾರಂಭದಲ್ಲಿ ಸಹಜವಾಗಿದ್ದು, ಸರಿಪಡಿಸಿಕೊಂಡು, ನಡೆಸಬೇಕಾಗಿರುತ್ತದೆ. ಆ ನಿಟ್ಟಿನಲ್ಲಿ ನಿಗಮದ ಎಲ್ಲ ವಿಭಾಗಗಳ ಅಧಿಕಾರಿಗಳು ದಿನಂಪ್ರತಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ.
10 ದಿನಗಳಲ್ಲಿ 1200 ಸಿಬ್ಬಂದಿಗಳು ವಿವಿಧ ಆಸ್ಪತ್ರೆಗೆ ಹೋಗಿ ಸೇವೆ ಪಡೆಯಲು ಸಾಧ್ಯವಾಗಿರುವುದು ಕೆಎಸ್ಆರ್ಟಿಸಿ ಆರೋಗ್ಯ ಯೋಜನೆಯು ಸರಿಯಾದ ದಾರಿಯಲ್ಲಿದೆ ಎಂಬುದಕ್ಕೆ ನಿದರ್ಶನವಾಗಿದೆ. ನಿಗಮದ ಸಮಸ್ತ ಯೋಜನೆಗಳ ಯಶಸ್ಸಿಗೆ ತಮ್ಮೆಲ್ಲರ ಸಹಕಾರ ಅಪಾರ ಮತ್ತು ಅನನ್ಯ. ತಮ್ಮ ಸಹಕಾರ ಹಾಗೂ ಪ್ರೋತ್ಸಾಹ ನಮ್ಮೊಡನೆ ಸದಾ ಇರಲಿ.
ಇನ್ನು ಮಂಡ್ಯ ಮೈಸೂರಿನ ಕೆಲವೊಂದು ಆಸ್ಪತ್ರೆಯ ಆಡಳಿತ ಮಂಡಳಿ ಗೊಂದಲಲ್ಲಿ ಚಿಕಿತ್ಸೆ ಕೊಡುವುದಕ್ಕೆ ಹಿಂದೇಟು ಹಾಕಿದ್ದು ನಿಜ. ಆದರೆ ವಿಷಯ ತಿಳಿದ ಬಳಿಕ ಸಂಬಂಧಪಟ್ಟ ಆಡಳಿತ ಮಂಡಳಿಯೊಂದಿಗೆ ನಿಗಮದ ಅಧಿಕಾರಗಳು ಮಾತುಕತೆನಡೆಸಿದ್ದು ಮುಂದಿನ ದಿನಗಳಲ್ಲಿ ಈರೀತಿ ಆಗದಂತೆ ಸದಾ ಎಚ್ಚರಿಕೆ ವಹಿಸಲಿದ್ದಾರೆ.
ಜತೆಗೆ ಮೊದಲಿಗೆ ಈ ರೀತಿ ಗೊಂದಲ ಮತ್ತಿತರ ಅನುಮಾನಗಳು ಕಾಡುವುದು ಸಹಜ ಮುಂದಿನ ದಿನಗಳಲ್ಲಿ ಇಂಥ ಯಾವುದೇ ಗೊಂದಲ ಸಮಸ್ಯೆಗಳು ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಹೀಗಾಗಿ ಯಾವುದೇ ನೌಕರರು ಈ ಬಗ್ಗೆ ಋಣಾತ್ಮಕವಾಗಿ ತಿಳಿದು ಕೊಳ್ಳಬಾರದು ಎಂದು ಸಂಸ್ಥೆಯ ಕಾರ್ಮಿಕ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.