- ಉತ್ತರ ನೀಡಲು ತಡಬಡಾಯಿಸಿದ ಡಿಸಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು
ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತರ ಭೇಟಿ ಕುರಿತು ವಾರದ ಹಿಂದೆಯೇ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಆದರೂ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಇದ್ದೀರಿ, ಸಾರ್ವಜನಿಕರು ನಿತ್ಯ ಓಡಾಟ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಲ್ಲ ಏಕೆ ಎಂದು ನಿಲ್ದಾಣಧಿಕಾರಿಗಳನ್ನು ಪ್ರಶ್ನಿಸಿದರು.
ಇನ್ನು ಲೋಕಾಯುಕ್ತರು ಬರುತ್ತಾರೆ ಎಂದು ತಿಳಿದ ಮೇಲೆಯೂ ಸ್ವಚ್ಛಗೊಳಿಸಿಲ್ಲ. ಇಷ್ಟೊಂದು ಬೇಜಾಬ್ದಾರಿ ತೋರಿದ್ದೀರಿ ಎಂದು ಸ್ಥಳದಲ್ಲಿ ಹಾಜರಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ಅವರನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತರಾಟೆಗೆ ತೆದುಕೊಂಡರು.
ಜಿಲ್ಲಾ ಕೇಂದ್ರದಲ್ಲಿರುವ ಬಸ್ ನಿಲ್ದಾಣವೇ ಈ ಸ್ಥಿತಿಯಲ್ಲಿದೆ, ಇನ್ನೂ ಬೇರೆ ಬಸ್ ನಿಲ್ದಾಣಗಳನ್ನು ಹೇಗೆ ಇಟ್ಟುಕೊಂಡಿದ್ದೀರೊ, ನನಗಂತು ಅರ್ಥವಾಗದು. ಬಸ್ ನಿಲ್ದಾಣದ ಪರಿಸ್ಥಿತಿ ಅತ್ಯಂತ ಕೆಟ್ಟದ್ದಾಗಿದೆ. ನಿಲ್ದಾಣ ಸ್ವಚ್ಛಗೊಳಿಸಿ ಎಷ್ಟು ದಿನವಾಗಿದೆಯೋ, ಸ್ವಚ್ಛತೆಗೆ ನೇಮಿಸಿರುವ ಏಜೆನ್ಸಿ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೀವೇನು ನಿಯಂತ್ರಣ ಮಾಡಿದ್ದೀರಿ? ಬಂದಪುಟ್ಟ ಹೋದಪುಟ್ಟ ಕೆಲಸ ಮಾಡುತ್ತಿದ್ದೀರಾ ಎಂದು ಡಿಸಿಯನ್ನು ಪ್ರಶ್ನಿಸಿದ ಉಪಲೋಕಾಯುಕ್ತರಿಗೆ ಉತ್ತರ ನೀಡಲು ತಡಬಡಾಯಿಸಿದ ಡಿಸಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡರು.
ಸಾರಿಗೆ ನಿಗಮಗಳಲ್ಲಿ ಕೆಲ ಅಧಿಕಾರಿಗಳು ಡ್ಯೂಟಿಗೆ ಹಾಜರಾಗುತ್ತಿದ್ದಂತೆ ಇಂದು ಯಾವ ಚಾಲನಾ ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಿದರೆ ನಮಗೆ ಮೊತ್ತವಾಗಿ ಲಂಚ ಸಿಗುತ್ತದೆ ಎಂಬ ಬಗ್ಗೆ ಕೆಲ ಡಿಎಂಗಳು, ಲೈನ್ ಚೆಕಿಂಗ್ ಸಿಬ್ಬಂದಿಗಳ ಜತೆ ಸಭೆ ನಡೆಸುವ ಚಾಳಿ ಇದೆ. ಇದು ತೊಲಗಿದರೆ ಬಸ್ ನಿಲ್ದಾಣಗಳಲ್ಲಿ ಇಂಥ ಅವ್ಯವಸ್ಥೆ ಇರುವುದಿಲ್ಲ.
ಕಾರಣ ನಿಷ್ಠೆಯಿಂದ ಡ್ಯೂಟಿ ಮಾಡುತ್ತಿರುವ ಚಾಲನಾ ಸಿಬ್ಬಂದಿಗಳನ್ನು ಶ್ಲಾಘಿಸಿ ಹಾಗೂ ಪ್ರತಿ ಬಸ್ ನಿಲ್ದಾಣಗಳಿಗೂ ಸಮಯ ಸಿಕ್ಕಾಗ ಡಿಸಿಗಳು ಭೇಟಿ ನೀಡಿ ಪರಿಶೀಲಿಸಿದರೆ ಎಲ್ಲ ನಿಲ್ದಾಣಗಳ ನೆಲಗಳು ಪ್ರಯಾಣಿಕರ ಪ್ರತಿಬಿಂಬ ಕಾಣಿವಂತೆ ಸ್ವಚ್ಛಗೊಳುತ್ತವೆ. ಆದರೆ ಬಹುತೇಕ ಡಿಸಿಗಳು ತಮ್ಮ ಜವಾಬ್ದಾರಿ ಮರೆತು ತಮಗೆ ಅಕ್ರಮವಾಗಿ ಹಣ ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿರುವುದರಿಂದ ಇಂಥ ಅವ್ಯವಸ್ಥೆಯನ್ನು ಬಹುತೇಕ ಎಲ್ಲ ನಿಲ್ದಾಣಗಳಲ್ಲೂ ಕಾಣುವಂತಾಗಿದೆ.