12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್ ಗಳಿಸಿ ಔಟ್: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..!
ನ್ಯೂಡೆಲ್ಲಿ: ರಣಜಿ ಟ್ರೋಫಿ ಪಂದ್ಯದಲ್ಲಿ 12 ವರ್ಷಗಳ ನಂತರ ಕಾಣಿಸಿಕೊಂಡು ಸಾವಿರಾರೂ ಪ್ರೇಕ್ಷಕರ ಆರ್ಷಣೆಯಾಗಿದ್ದ ವಿರಾಟ್ ಕೊಹ್ಲಿ ರೈಲ್ವೇಸ್ ವಿರುದ್ಧ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ ಔಟ್ ಆಗಿ ನಿರಾಸೆ ಮೂಡಿಸಿದ್ದಾರೆ. ಕೊಹ್ಲಿ ಡಗ್ಔಟ್ನತ್ತ ಧಾವಿಸುತ್ತಿದ್ದಂತೆಯೇ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಗೊಣಗುತ್ತಲೇ ಕ್ರೀಡಾಂಗಣದಿಂದ ಹೊರ ಬಂದರು.
ರೈಲ್ವೇಸ್ ವಿರುದ್ಧ 2ನೇ ದಿನದಾಟದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ದೈತ್ಯ ಆಟಗಾರ, 15 ಎಸೆತಗಳನ್ನು ಎದುರಿಸಿ 1 ಫೋರ್ ಸಹಿತ ಕೇವಲ 6 ರನ್ಗಳಿಗೆ ಹಿಮಾಂಶು ಸಾಂಗ್ವಾನ್ಗೆ ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರನಡೆದರು.
ಫಾರ್ಮ್ ಸ್ಥಿರತೆ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಕೊಹ್ಲಿ, ಬಿಸಿಸಿಐ ಸೂಚನೆ ಮೇರೆಗೆ ದಶಕದ ನಂತರ ರಣಜಿ ಆಡಲು ನಿರ್ಧರಿಸಿದ್ದರು. ದೇಶೀಯ ಪಂದ್ಯದಲ್ಲಿ ಅವರ ಆಟವನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಪ್ರೇಕ್ಷಕರು ಎದುರು ನೋಡುತ್ತಿದರು. ಆದರೆ ಕೊಹ್ಲಿ ಎಲ್ಲದಕ್ಕೂ ತಣ್ಣಿರೆರೆಚಿದರು.
ವಿಡಿಯೋ ಸಿಕ್ಕಾಪಟ್ಟೆ ವೈರಲ್: ದಿಗ್ಗಜ ಕ್ರಿಕೆಟಿಗನನ್ನು ಯುವ ಆಟಗಾರ ಹಿಮಾಂಶು ಸಾಂಗ್ವಾನ್ ಔಟ್ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾಂಗ್ವಾನ್ ವೇಗದ ದಾಳಿಗೆ ವಿಕೆಟ್ ಚಿಂದಿಯಾಗಿರುವುದು ಕೊಹ್ಲಿ ಅಭಿಮಾನಿಗಳಿಗೂ ನಿದ್ದೆಗೆಡಿಸಿದೆ.
ಹಿಮಾಂಶು ಸಾಂಗ್ವಾನ್ ಅಂದರೆ? ರೈಲ್ವೆಸ್ ತಂಡದ ಹಿಮಾಂಶು ಸಾಂಗ್ವಾನ್ ಬಲಗೈ ಮಧ್ಯಮ ವೇಗಿ ಮತ್ತು ದೆಹಲಿಯವರೇ ಆಗಿರುವ ಸಾಂಗ್ವಾನ್ 2019ರ ಸೆಪ್ಟೆಂಬರ್ನಲ್ಲಿ ಲಿಸ್ಟ್-ಎ ದೇಸಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 2019-20ರ ವಿಜಯ್ ಹಜಾರೆ ಟ್ರೋಫಿಯಲ್ಲಿ ರೈಲ್ವೆಸ್ ತಂಡದ ಪರವಾಗಿ ಗುರುತಿಸಿಕೊಂಡರು.
ನಂತರ 2019-20ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮ್ಮ T20 ಚೊಚ್ಚಲ ಪಂದ್ಯವನ್ನಾಡಿದ ಸಾಂಗ್ವಾನ್, 2019ರ ಡಿಸೆಂಬರ್ನಲ್ಲಿ ರೈಲ್ವೇಸ್ಗಾಗಿ ರಣಜಿ ಟ್ರೋಫಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪ್ರವೇಶಿಸಿದರು.