ಕಲಬುರಗಿ: ವಿಶ್ವಮಾರಿ ಕೊರೊನಾಕ್ಕೆ ಕಲಬುರಗಿಯಲ್ಲಿ 80 ವರ್ಷದ ವೃದ್ಧ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಈ ವೃದ್ಧರು ಕಳೆದ ಮೂರು ವರ್ಷದಿಂದಲೂ ಪಾರ್ಕಿನ್‌ಸನ್ ಎಂಬ ರೋಗದಿಂದ ಬಳಲುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಉಸಿರಾಟದ ತೊಂದರೆಗೆ ಒಳಗಾಗಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೆ ನಿನ್ನೆ ನಿಧನರಾಗಿದ್ದರು.
ಈ ಬಗ್ಗೆ ವೃದ್ಧರ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಜಿಲ್ಲೆಯಲ್ಲಿ ಕೊರೊನಾಗೆ ಒಟ್ಟು 4 ಮಂದಿ ಅಸುನೀಗಿದ್ದಾರೆ ಎಂದು ವೈದ್ಯಕೀಯ ಸಚಿವರು ಟ್ವಿಟ್ ಮಾಡಿದ್ದು, ಇಲ್ಲಿನ ಜನರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ 395 ದಾಟಿದೆ. ಇನ್ನು ಕೊರೊನಾ ಗೆದ್ದು ಬಂದವರ ಸಂಖ್ಯೆ 112ಕ್ಕೂ ಹೆಚ್ಚಿದ್ದು, ಒಟ್ಟಾರೆ 280ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ತನ್ನ ಕಬಂಧ ಬಾಹುವನ್ನು ಚಾಚುತ್ತಲೆ ಇದೆ. ಕಳೆದ 24 ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕಿಗೆ ಒಳಗಾಗಿದ್ದು, ಮೃತಪಟ್ಟವರ ಸಂಖ್ಯೆಯೂ ಏರುತ್ತಲೆ ಇದೆ.