ಮಡಿಕೇರಿ: ಜಿಲ್ಲೆಯಲ್ಲಿ ಮೇ 3 ರ ತನಕ ಲಾಕ್‍ಡೌನ್ ಜಾರಿಯಲ್ಲಿದ್ದು, ವಕ್ಫ್ ಮಂಡಳಿ ನೀಡಿರುವ ಮಾರ್ಗ ಸೂಚಿಗಳನ್ವಯ ರಂಜಾನ್ ಮಾಸವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಂಜಾನ್ ಆಚರಣೆ ಸಂಬಂಧ ಪಾಲಿಸಬೇಕಾದ ನಿಯಮಗಳಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಜಾನ್ ಮಾಸದಲ್ಲಿ ಮುಸ್ಲಿಂ ಧರ್ಮೀಯರು ಬಡವರಿಗೆ ದಾನ-ಧರ್ಮ ಮಾಡುವ ಪರಿಪಾಠವಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಗದಿಪಡಿಸಿದ ದಿನಗಳಲ್ಲಿ ನಿಗದಿತ ಸಮಯದಲ್ಲಿ ಬಡವರಿಗೆ ದಾನ-ಧರ್ಮ ಮಾಡಬಹುದು ಎಂದು ತಿಳಿಸಿದರು.
ಮಸೀದಿಗಳಲ್ಲಿ ಕಡ್ಡಾಯವಾಗಿ ಗುಂಪು ಸೇರಿ ಪ್ರಾರ್ಥನೆ ಮಾಡುವುದನ್ನು ಈಗಾಗಲೇ ನಿಷೇಧಿಸಲಾಗಿದ್ದು, ಇದನ್ನು ಮುಸ್ಲಿಂ ಧರ್ಮೀಯರು ತಪ್ಪದೆ ಪಾಲಿಸಬೇಕು. ಮೇ 3ರ ತನಕ ಸರ್ಕಾರವು ಹೊರಡಿಸಿರುವ ಲಾಕ್‍ಡೌನ್ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಮುಸ್ಲಿಂ ಮುಖಂಡರಿಗೆ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾತನಾಡಿ ರಂಜಾನ್ ಮಾಸದಲ್ಲಿ ಮುಸ್ಲಿಂ ಧರ್ಮೀಯರು ಕಡ್ಡಾಯವಾಗಿ ಮನೆಯಲ್ಲಿಯೇ ಪ್ರಾರ್ಥನೆ ಮಾಡುವುದು, ಮನೆಗಳ ಮೇಲ್ಛಾವಣಿಗಳ ಮೇಲೆ ಅಕ್ಕ-ಪಕ್ಕದ ಮನೆಯರನ್ನು ಸೇರಿಸಿಕೊಂಡು ಗುಂಪಾಗಿ ನಮಾಝ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಇದನ್ನು ತಪ್ಪದೆ ಪಾಲಿಸಬೇಕೆಂದು ತಿಳಿಸಿದರು. ಡಿವೈಎಸ್‍ಪಿ ದಿನೇಶ್ ಕುಮಾರ್ ಇತರರು ಇದ್ದರು.