ಬೆಂಗಳೂರು: ಮೂರು ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಬೇರು ಸಡಿಲಗೊಂಡಿದ್ದ ಬೃಹತ್ ಗಾತ್ರದ ಮರ ಧರೆಗುರುಳಿದ ಪರಿಣಾಮ ಎರಡು ಕಾರುಗಳು ಜಖಂಗೊಂಡಿರುವ ಘಟನೆ ಭಾನುವಾರ ಬೆಳ್ಳಂಬೆಳಗ್ಗೆ ಗಿರಿನಗರದಲ್ಲಿ ನಡೆದಿದೆ,
ಅದೃಷ್ಟವಸಾತ್ ಕೊರೊನಾ ಭಯದಲ್ಲಿರುವ ಜನರು ಮನೆಯಿಂದ ರಸ್ತೆಗೆ ಬಾರದಿದ್ದರಿಂದ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದು, ಮರದ ಕೆಳಗೆ ನಿಲ್ಲಿಸಿದ ಕಾರುಗಳಲ್ಲಿ ಒಂದು ಸಂಪೂರ್ಣವಾಗಿ ಜಖಂಗೊಂಡಿದ್ದು, ಮತ್ತೊಂದು ಭಾಗಶಃ ಜಖಂಗೊಂಡಿದೆ ಎಂದು ತಿಳಿಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನೆಲ ತೇವವಾಗಿದ್ದರಿಂದ ಮೋರಿಯಲ್ಲಿ ಬೇರು ಬಿಟ್ಟಿದ್ದ ಮರ ಬುಡ ಹಾಗೂ ಕಲ್ಲು ಚಪ್ಪಡಿಗಳ ಸಮೇತ ರಸ್ತೆಗೆ ಉರುಳಿದೆ. ಇದರಿಂದ ಸಂಚಾರಕ್ಕೆ ಕೆಲ ಸಮಯ ವ್ಯತ್ಯಯವಾಗಿತ್ತು. ಬಿಬಿಎಂಪಿ ಸಿಬ್ಬಂದಿ ಬಂದು ಮರ ತೆರವುಗೊಳಿಸಿದ ಬಳಿಕ ರಸ್ತೆ ಸಂಚಾರ ಸುಗಮವಾಯಿತು.
ಬೆಂಗಳೂರಿನಲ್ಲಿ ಮಾತ್ರವಲ್ಲದೇ ಮಲೆನಾಡು ಭಾಗದಲ್ಲೂ ಮಳೆ ಸುರಿಯುತ್ತಿದ್ದು, ಮಾವಿನ ಫಸಲು ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಅಲ್ಲದೆ ಕೊಯ್ಲಿಗೆ ಬಂದ ಭತ್ತ ಸೇರಿದಂತೆ ಇತರ ಬೆಳೆಗಳು ನಾಶವಾಗಿವೆ.
ಪೂರ್ವಮುಂಗಾರು ಆರಂಭವಾಗಿರಿವುದರಿಂದ ರಾಜ್ಯದ ಹಲವೆಡೆ ವರುಣನ ಅಬ್ಬರ ಶುರುವಾಗಿದೆ. ವಿವಿಧ ದ್ವಿದಳ ಧಾನ್ಯಗಳನ್ನು ರೈತರು ಭೂಮಿಗೆ ಬಿತ್ತುತ್ತಿದ್ದಾರೆ. ಇನ್ನು ಹಲವೆಡೆ ಮಳೆ ತನ್ನ ಮುಖವನ್ನೇ ತೋರಿಸಿಲ್ಲದ್ದರಿಂದ ರೈತರು ಫಸಲೊಡ್ಡಲು ಕಾದು ಕುಳಿತ್ತಿದ್ದಾರೆ.