ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಭಾನುವಾರ ಮಧ್ಯಾಹ್ನದ ವರೆಗೆ ಬಂದ ವರದಿಯಲ್ಲಿ ಮಾತ್ರ ಒಂದೇಒಂದು ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ.
ಇದು ಒಂದೂವರೆ ತಿಂಗಳ ನಂತರ ರಾಜ್ಯದಲ್ಲಿ ಒಬ್ಬರಿಗೆ ಮಾತ್ರ ಕೊರೋನಾ ಪಾಸಿಟಿವ್ ಬಂದಿರುವುದು ಇಂದಿನ ಮಟ್ಟಿಗೆ ಆಶಾದಾಯಕ ಬೆಳವಣಿಗೆ ಎಂದು ಹೇಳಬಹುದಾಗಿದೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಈಕೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು, 432ನೇ ಸೋಂಕಿತೆ 78 ವರ್ಷದ ವೃದ್ಧೆಯ ಸಂಪರ್ಕಕ್ಕೆ ಬಂದಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬಂಟ್ವಾಳದ ವೃದ್ಧೆ ಏಪ್ರಿಲ್ 21ರಂದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸೋಂಕಿನಿಂದ ಮೃತಪಟ್ಟಿದ್ದರು. ಈ ವೃದ್ಧೆಯ ಸಂಪರ್ಕದಿಂದ ಸ್ವೀಪರ್ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ಈಕೆಗೆ ಭಾನುವಾರ ಇರುವುದು ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ 18 ಮಂದಿ ಅಸುನೀಗಿದ್ದು, 177 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.