ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿಗೆ ಜೂನ್ 25 ರಂದು ನಡೆಯುವ ಪರೀಕ್ಷೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದರುವ ಅವರು, ವಿದ್ಯಾರ್ಥಿಯ ಪಾಲಕರು ಅಥವಾ ಸಂಬಂಧಿಕರು ಸಹ ಕ್ವಾರಂಟೈನ್ ನಲ್ಲಿದ್ದರೆ ಅಂತಹ ಪ್ರಕರಣಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಲು ಆರೋಗ್ಯ ಇಲಾಖೆಯ ಸಹಕಾರ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಶಿಕ್ಷಣ ಇಲಾಖೆಯ ದಾಖಲೆ ದತ್ತಾಂಶಗಳೊಂದಿಗೆ ತಾಳೆ ಮಾಡಿ ಅಂತಹ ವಿದ್ಯಾರ್ಥಿಗಳಿಗೆ ಈ ಬಾರಿಯ ಪರೀಕ್ಷೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುವುದು. ಜತೆಗೆ ಯಾವುದೇ ಸಮಸ್ಯೆ ಉದ್ಭವವಾಗದಂತೆ ಎಲ್ಲಾ ರೀತಿಯ ಪೂರ್ವಭಾವಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ದ್ವಿತೀಯ ಪಿಯು ಆಂಗ್ಲ ಮಾಧ್ಯಮ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು ಅಭಿನಂದನೆ ಸಲ್ಲಿಸುತ್ತೇನೆ. ಪಿಯು ಪರೀಕ್ಷೆಯಲ್ಲಿ ಸಾರ್ವಜನಿಕ ಅಂತರ ಕಾಯ್ದುಕೊಳ್ಳದ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.