ಬೆಂಗಳೂರು: ಬೆಡ್ ಖಾಲಿ ಎಂದು ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿ ಆಂಬುಲೆನ್ಸ್‌ನಲ್ಲೆ ಇರಿಸಿದ್ದ ಮೂರು ಮಕ್ಕಳ ತಂದೆ ಕೊರೊನಾ ಪಾಸಿಟಿವ್ ವ್ಯಕ್ತಿ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚೋಳರಪಾಳ್ಯದ 52ವರ್ಷದ ವ್ಯಕ್ತಿಯೇ ಬೆಡ್‌ಸಿಗದೆ ಮೃತಪಟ್ಟವರು. ಮೂರು ದಿನದ ಹಿಂದೆ ಕೊರೊನಾ ಸೋಂಕಿತ ಈ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಆತನ ಗಂಟಲು ದ್ರವವನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವೇಳೆ ಆಸ್ಪತ್ರೆಯ ವೈದ್ಯರು ಒಂದು ಶರತ್ತು ಹಾಕಿದ್ದರು. ಒಂದು ವೇಳೆ ಕೊರೊನಾ ಪಾಸಿಟಿವ್ ಬಂದರೆ ಆ ವರದಿಯನ್ನು ನಿಮ್ಮ ಕೈಗೆ ಕೊಡೋದಿಲ್ಲ ನಾವು ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಕೊಡುತ್ತೇವೆ ಎಂದು ಅದರಂತೆ ಪಾಸಿಟಿವ್ ರೀಪೋರ್ಟ್ ಬಂದಿದೆ.
ಆ ವರದಿಯನ್ನು ಬಿಬಿಎಂಪಿಗೆ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೆ ಸೋಂಕಿತ ವ್ಯಕ್ತಿಯನ್ನು ಈ ನಡುವೆ ಮೂರುದಿನಗಳಿಂದ ಮನೆಯಲ್ಲೇ ಇಟ್ಟುಕೊಳ್ಳಲಾಗಿತ್ತು. ನಂತರ ಅವರ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾದ್ದರಿಂದ ಆಂಬುಲೆನ್ಸ್ ಮೂಲಕ ಕರೆ ತರಲಾಯಿತು. ಆದರೆ, ಬೆಡ್ ಖಾಲಿಯಿಲ್ಲ ಎಂದು ಅವರನ್ನು ಆಂಬುಲೆನ್ಸ್‌ನಲ್ಲೇ ಇರಿಸಲಾಗಿತ್ತು.
ಈ ವೇಳೆ ಸೂಕ್ತ ಚಿಕಿತ್ಸೆ ಸಿಗದೆ ಆಬುಲೆನ್ಸ್‌ನಲ್ಲೇ ನರಳಿ ಕೊನೆಯುಸಿರೆಳೆದರು. ಅವರು ಸತ್ತನಂತರವೂ ಕೋವಿಡ್ ಪರೀಕ್ಷೆ ವರದಿ ಏನು ಬಂದಿದೆ ಎಂದು ಮೃತರ ಕುಟುಂಬದವರಿಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಅದರ ಜತೆಗೆ ಬಿಬಿಎಂಪಿ ಅಧಿಕಾರಿಗಳು ಒಂದು ಡೆತ್ ಸರ್ಟಿಫಿಕೇಟ್ ಕೊಡಲೂ ಹಿಂದೆಮುಂದೆ ನೋಡುತ್ತಿದಾರೆ. ಕೇಳಿದರೆ ಉಡಾಫೆ ಉತ್ತರಕೊಡುತ್ತಾರೆ ಎಂದು ಮೃತರ ಕುಟುಂಬದವರು ಆರೋಪಿಸುತ್ತಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ರಾಮಕೃಷ್ಣ ಬಡಾವಣೆಯ ಮಾಳಗಾಳದಲ್ಲಿ ಕೊರೊನಾ ಸೋಂಕಿತ 60 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇವರು ಸಹ ಮನೆಯಲ್ಲೇ ಮೃತಪಟ್ಟಿದ್ದು, ಅವರ ಶವವನ್ನು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಕೊಂಡು ಸಾಗಿಸಲಾಗಿದೆ. ಅಂದರೆ ಇಲ್ಲಿ ಕೋವಿಡ್ ನಿಯಮವನ್ನೇ ಬಿಬಿಎಂಪಿ ಅಧಿಕಾರಿಗಳು ಪಾಲನೆ ಮಾಡಿಲ್ಲ. ಒಂದು ಮೃತದೇಹವನ್ನು ಯಾವರೀತಿ ಕವರ್ ಮಾಡಬೇಕೋ ಆ ರೀತಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತಳೆದಿದ್ದಾರೆ.
ಇದೆಲ್ಲವನ್ನು ನೋಡಿದರೆ ಸರ್ಕಾರ ರಾಜ್ಯದಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನವು ಕಾಡುತ್ತಿದೆ. ಕಡೇಪಕ್ಷ ಕೊರೊನಾ ಸೋಂಕಿತರು ಅಸುನೀಗಿದ ಮೇಲಾದರು ಒಂದು ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅದರ ಆಡಳಿತ ವೈಕರಿ ಬಗ್ಗೆ ಜನರಲ್ಲಿ ಎಂಥ ಭಾವನೆ ಮೂಡುತ್ತದೆ. ಅದನ್ನು ಏಕೆ ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ.
ಇನ್ನಾದರೂ ಕೊರೊನಾ ಪಾಸಿಟಿವ್‌ನಿಂದ ಬಳಲುತ್ತಿರುವವರಿಗೆ ಇರುವುದರಲ್ಲೇ ಸೂಕ್ತ ಚಿಕಿತ್ಸೆನೀಡಿ ಅವರನ್ನು ಆದಷ್ಟು ಗುಣಪಡಿಸುವ ಜವಾಬ್ದಾರಿಯನ್ನು ಸರ್ಕಾರ ಜರೂರತ್ತಾಗಿ ತೆಗೆದುಕೊಳ್ಳಬೇಕು ಎಂಬುವುದು ಜನರ ಒತ್ತಾಯವಾಗಿದೆ.