ಹಾವೇರಿ: ಕೊರೊನಾ ಪಾಸಿಟಿವ್ ವ್ಯಕ್ತಿ ನಾಪತ್ತೆಯಾಗಿದ್ದು, ಆತನ ಪತ್ತೆಕಾರ್ಯದಲ್ಲಿ ಕೊರೊನಾ ವಾರಿಯರ್ಸ್ ನಿರತರಾಗಿದ್ದು, ಇನ್ನು ಪತ್ತೆಯಾಗಿಲ್ಲ.
ಬೆಂಗಳೂರಿನಿಂದ ಹಿರೇಕೆರೂರ ತಾಲೂಕಿನ ಪರ್ವತಸಿದ್ಧಗೇರಿ ಸ್ವ ಗ್ರಾಮ ಮರಳಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದ 29 ವರ್ಷದ ಯುವಕ ಜುಲೈ 2 ರಂದು ಸ್ವತಃ ಜ್ವರ ಪೀಡಿತನೆಂದು ತಾನೇ ಹಿರೇಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಾಬ್ ಪರೀಕ್ಷೆ ಮಾಡಿಸಿಕೊಂಡಿದ್ದ.
ಜುಲೈ 4 ರಂದು ಕೋವಿಡ್ ದೃಢಪಟ್ಟಿರುತ್ತದೆ. ಜೂನ್ 15, 16 ರಂದು ದಾವಣಗೆರೆ ಹಾಗೂ ಜೂನ್ 24 ರಂದು ಶಿವಮೊಗ್ಗಕ್ಕೆ ಪ್ರಯಾಣಿಸಿದ ಮಾಹಿತಿ ಇದೆ. ಆ ವ್ಯಕ್ತಿ ನಾಪತ್ತೆಯಾಗಿದ್ದು, ಸದ್ಯ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಹಾವೇರಿ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 59 ವರ್ಷದ ಪುರುಷನಿಗೆ ಜುಲೈ 1 ರಂದು ಜ್ವರ ಹಾಗೂ ನೆಗಡಿ ಕಾಣಿಸಿಕೊಂಡ ಸಂಬಂಧ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹೋಂ ಕ್ವಾರಂಟೈನ್ಗೆ ಒಳಗಾಗಿದ್ದ. ಜುಲೈ 4 ರಂದು ಪಾಸಿಟಿವ್ ದೃಢಪಟ್ಟಿರುತ್ತದೆ. ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸೋಂಕಿತರ ನಿವಾಸದ 100 ಮೀ.ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವ ಸೋಂಕಿತರ ನಿವಾಸದ 200 ಮೀಟರ್ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾದ ತಿಪ್ಪಾಯಿಕೊಪ್ಪ, ತಿಳವಳ್ಳಿ, ಕರ್ಜಗಿ, ಕನವಳ್ಳಿ, ಪರ್ವತಸಿದ್ಧಗೇರಿ ಗ್ರಾಮಗಳನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ.