ರಾಯಚೂರು: ಜಿಲ್ಲೆ ಸಿಂಧನೂರಿನಲ್ಲಿ ಕಳೆದ ವರ್ಷ ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ ಯುವಕನ ಮೇಲಿನ ಸೇಡಿಗಾಗಿ ಆತನ ತಾಯಿ ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಮನೆಗೆ ನುಗ್ಗಿ ಶನಿವಾರ ಸಂಜೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಈ ಸಂಬಂಧ ಹೆಣ್ಣಿನ ಕಡೆಯವರು ಸಿಂಧನೂರು ನಗರದ ಸುಕಾಲಪೇಟೆಯಲ್ಲಿದ್ದ ಯುವಕನ ಮನೆಗೆ ನುಗ್ಗಿ ಸುಮಿತ್ರಾ (58) ಶ್ರೀದೇವಿ (36) ಹನುಮೇಶ (35) ನಾಗರಾಜ (38) ಎಂಬುವರನ್ನು ಕೊಂದಿದ್ದಾರೆ. ಘಟನೆಯಲ್ಲಿ ರೇವತಿ ತಾಯಮ್ಮ ಹಾಗೂ ಈರಪ್ಪ ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮಿಗಳಿಬ್ಬರೂ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಕಳೆದ ವರ್ಷ ಪ್ರೀತಿಸಿ ಒಂದೇ ಜಾತಿಗೆ ಸೇರಿದ (ಕುರುಬ) ಈ ಪ್ರೇಮಿಗಳು ವಿವಾಹವಾಗಿ ಬೇರೆ ಊರಿನಲ್ಲಿದ್ದರು. ಈ ನಡುವೆ ಎರಡು ಮನೆಯವರ ಕೋಪತಾಪ ಕಡಿಮೆ ಆಗಿದೆ ಎಂದು ಇತ್ತೀಚೆಗೆ ಸಿಂಧನೂರಿಗೆ ವಾಪಸಾಗಿದ್ದರು. ಈ ಸಂಬಂಧ ಎರಡು ಕುಟುಂಬಗಳ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಮತ್ತೆ ಶನಿವಾರ ಜಗಳ ನಡೆದಿದ್ದು, ಈ ವೇಳೆ ಯುವತಿಯ ತಂದೆ ಕೋಣದ ಫಕೀರಪ್ಪ ಹಾಗೂ ಆತನ ಸಹೋದರರು ಬಂದು ಹತ್ಯೆ ಮಾಡಿದ್ದಾರೆ.
ಈ ಸಂಬಂಧ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಮಾಡಿ ಪರಾರಿಯಾಗಿರುವವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.