ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಇಲ್ಲ, ಬೆಡ್ ಖಾಲಿ ಇಲ್ಲ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದು ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ ಗರಂ ಆದ ಘಟನೆ ಇಂದು ನಡೆಯಿತು.
ನಾಳೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್ಡೌನ್ ಮಾಡುವ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಆಂಬುಲೆನ್ಸ್ ವಿಷಯ ಬಂದಾಗ ಸಿಟ್ಟಾದ ಬಿಎಸ್ವೈ ನಾನು ಮುಖ್ಯಮಂತ್ರಿ ಆದೇಶ ಮಾಡುತ್ತಿದ್ದೇನೆ ನಾನು ಮಾಡಿದ ಆದೇಶವನ್ನು ಪಾಲಿಸಿ ಸುಖ ಸುಮ್ಮನೆ ನೆಪ ಹೇಳಿಕೊಂಡು ಕಾಲ ಕಳೆಯಬೇಡಿ ಎಂದು ಅಧಿಕಾರಿಗಳಿಗೆ ಚಳಿ ಬಿಡಿಸಿದರು.
ಈ ನಡುವೆ ಕೆಲ ಸಚಿವರು ಕೂಡ ಸಿಎಂ ಅದೇಶವನ್ನು ಪಾಲಿಸುವಲ್ಲಿ ಬೇಜವಾಬ್ದಾರಿ ತಳೆದಿದ್ದು ಅವರ ಮಾತೇನು ಕೇಳಬೇಕು ಹೀಗೆಮಾಡಿ ಹಾಗೆಯೇ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡುತ್ತಿದ್ದಾರೆ ಎಂಬ ಮಾತುಗಳು ವಿಧಾನಸೌಧದ ಮೊಗಶಾಲೆಯಲ್ಲೇ ಹರಿದಾಡುತ್ತಿವೆ.
ಹೀಗಾಗಿ ಇದೆಲ್ಲವನ್ನು ಕಂಡು ಕಾಣದಂತೆ ಸಹಿಸಿಕೊಂಡಿದ್ದ ಸಿಎಂ ಕೊರೊನಾ ಸೋಂಕು ರಾಜ್ಯದಲ್ಲಿ ಹೇಚ್ಚಾಗುತ್ತಿರುವುದಕ್ಕೆ ಕೆಂಡಮಂಡಲರಾಗಿದ್ದು, ಸಿಎಂ ಹೇಳುವುದನ್ನಷ್ಟೇ ಪಾಲಿಸಿ ಉಳಿದ ವಿಷಯಗಳ ಬಗ್ಗೆ ಮಾತನಾಡಬೇಡಿ. ಮೊದಲು ಕೊರೊನಾ ಪಾಸಿಟಿವ್ ಇದೆ ಎಂದು ತಿಳಿದ ಕೂಡಲೇ ಅಂತ ವ್ಯಕ್ತಿಗಳನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಕೆಲ ನಾಳೆಯಿಂದ ಚುರುಕಾಗಿ ನಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.